ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ

Author : ಸಂತೋಷ್ ಕುಮಾರ್‌ ಬಿ.ಎಸ್‌

Pages 120

₹ 120.00




Year of Publication: 2023
Published by: ಬೆನಕ ಬುಕ್ಸ್‌ ಬ್ಯಾಂಕ್‌
Address: ಯಳಗಲ್ಲು, ಕೋಡೂರು - ಅಂಚೆ, 577 418 ಹೊಸನಗರ - ತಾಲ್ಲೂಕು, ಶಿವಮೊಗ್ಗ - ಜಿಲ್ಲೆ
Phone: 7338437666

Synopsys

'ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ’ ಸಂತೋಷ್‌ ಕುಮಾರ್‌ ಬಿ.ಎಸ್‌ ಅವರು ಬರೆದಿರುವ, ಕನ್ನಡದಲ್ಲಿ ಹಿಂದೂ ಧರ್ಮದ ಮಹತ್ವವನ್ನು ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿಕೊಡುವ ಒಂದು ಅಪರೂಪದ ಪುಸ್ತಕ. ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಅಂಶಗಳಲ್ಲೂ ಹಿಂದೂ ಧರ್ಮ ಹೇಗೆ ವೈಜ್ಞಾನಿಕತೆಯನ್ನು ಅಳವಡಿಸಿಕೊಂಡಿತ್ತು, ಈ ಮೂಲಕ ಹಿಂದೂ ಧರ್ಮದ ನಂಬಿಕೆಗಳಿಗೆ ಸರಳವಾದ, ಆದರೆ ಪರಿಣಾಮಕಾರಿಯಾದ ವೈಜ್ಞಾನಿಕ ಹಿನ್ನೆಲೆಯಿದೆ ಎನ್ನುವುದನ್ನು ಈ ಪುಸ್ತಕದ 50 ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಉದಾಹರಣೆಗೆ ಹಿಂದೂಗಳಲ್ಲಿರುವ ’ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವುದು’, ’ಹಿಂದೂ ದೇವಾಲಯಗಳಲ್ಲಿ ಘಂಟೆಗಳ ಬಳಕೆ’, ’ನೆಲಕ್ಕೆ ಸೆಗಣಿ ಸಾರಿಸುವುದೇಕೆ’, ’ಹೋಮವನ್ನೇಕೆ ಮಾಡುವುದು’, ಕಾಲುಂಗುರ ಧರಿಸುವುದು’, ’ಸೀಮಂತವನ್ನೇಕೆ ಮಾಡಬೇಕು’... ಹೀಗೆ ಹಿಂದೂ ಧರ್ಮೀಯರ ನಿತ್ಯ ಬದುಕಿನಲ್ಲಿ ಬೆರೆತು ಹೋಗಿರುವ ವಿವಿಧ 50 ಸಂಗತಿಗಳ ಹಿಂದೆ ನಮ್ಮ ಧರ್ಮದ ಹಿರಿಯರು ಅಳವಡಿಸಿರುವ ವೈಜ್ಞಾನಿಕ ಹಿನ್ನೆಲೆಗಳು, ವೈದ್ಯಕೀಯ ಕಾರಣಗಳು ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ, ಅಂದರೆ ಕೆಲವೇ ಕೆಲವು ಸಾಲುಗಳಲ್ಲಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಹಾಗೆಂದು ಅತಿಯಾದ ವಿವರಣೆಗಳಿಂದಲೂ ಭಾರವಾಗದ ಇಲ್ಲಿನ ವಿಷಯಗಳು, ಹಿಂದೂ ಧರ್ಮದ ಮಹತ್ವಕ್ಕೆ ಹಿಡಿದ ಒಂದು ಪುಟ್ಟ ದೀವಿಗೆಯಂತೆ ಇದೆ. ಅಂದರೆ ಇಲ್ಲಿ ಇಂತಹದ್ದೇನೋ ವಿಷಯವಿದೆ ನೋಡು, ಇನ್ನೂ ಅದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ದಾರಿಯನ್ನು ನಾವು ತೋರಿಸಿದ್ದೇವೆ. ಇದಕ್ಕೆ ಹೊಸ ಹೊಳಹು, ಆಯಾಮಗಳಿದ್ದರೆ ಅದನ್ನು ಹುಡುಕುವ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು ಎನ್ನುವ ಉದ್ದೇಶದೊಂದಿಗೆ ಒಂದು ಕೈಪಿಡಿಯಂತೆ ಈ ಪುಸ್ತಕ ರೂಪುಗೊಂಡಿದೆ.

ನಮ್ಮ ಹಿರಿಯರು ನೇರವಾಗಿ ಹೇಳಿದ, ಅವರು ಯೋಚಿಸಿರಬಹುದಾದ, ಅವರು ಇನ್ಯಾರಿಗೋ ಹೇಳಿರಬಹುದಾದ, ಜೊತೆಗೆ ಅಲ್ಲಿ ಇಲ್ಲಿ ಓದಿದ ಸಂಗತಿಗಳನ್ನು ಒಟ್ಟಾಗಿಸಿ, ಹಿಂದೂ ಧರ್ಮದ ಮಹತ್ವವನ್ನು ಎಲ್ಲರಿಗೂ ಹಂಚಬೇಕು ಎನ್ನುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ. ಜೊತೆಗೆ ನಮ್ಮ ಹಿರಿಯರು ರೂಪಿಸಿದ, ಆದರೆ ಇಂದಿನವರು ಆಧುನಿಕತೆ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗಿನ ಅಂಧ ಆಕರ್ಷಣೆಯಿಂದ ಗೇಲಿ ಮಾಡುವ, ಇದರಲ್ಲೇನಿದೆ, ಇದೆಲ್ಲವೂ ಮೂಢನಂಬಿಕೆ ಎಂದು ಹಗುರವಾಗಿ ಕಾಣುವವರಿಗೆ ಹಿಂದೂ ಧರ್ಮದ ಪ್ರತಿಯೊಂದು ನಂಬಿಕೆ, ಆಚರಣೆ, ಸಂಗತಿಗಳಲ್ಲಿಯೂ ಒಂದಲ್ಲ ಒಂದು ರೀತಿಯ ವೈಜ್ಞಾನಿಕ ಹಿನ್ನೆಲೆಯಿದೆ ಹಾಗೂ ನಮ್ಮ ಹಿರಿಯರು ಪ್ರತಿಯೊಂದನ್ನೂ ಸಾಕಷ್ಟು ಯೋಚಿಸಿಯೇ ತಮ್ಮ ಬದುಕಿನ ಒಂದು ಭಾಗವಾಗಿಸಿಕೊಂಡು, ನಮಗೆ ಅದನ್ನು ಬಿಟ್ಟು ಹೋಗಿದ್ದಾರೆ ಎನ್ನುವುದನ್ನು ತಿಳಿಸುವ ಆಶಯವೂ ಈ ಪುಸ್ತಕದ್ದಾಗಿದೆ.

Excerpt / E-Books

ಸಾವಿನ ಮನೆಗೆ ಹೋಗಿ ಬಂದವರು ಸ್ನಾನ ಮಾಡುವುದೇಕೆ?! ಮೃತ ದೇಹದ ಅಂತಿಮ ದರ್ಶನ ಪಡೆಯಲು ಹೋದವರು ಮನೆಗೆ ಮರಳಿದಾಗ ನೇರವಾಗಿ ಮನೆಯೊಳಗೆ ಹೋಗದೇ ಸ್ನಾನ ಮಾಡಬೇಕು, ಈ ಮೂಲಕ ಶುದ್ಧವಾಗಬೇಕು ಎನ್ನುವುದು ನಮ್ಮ ಹಿಂದೂ ಸಂಪ್ರದಾಯ. ಶುದ್ಧ’ವಾಗುವುದು ಎಂದರೆ ಸಾವಿನ ಮನೆಗೆ ಹೋಗಿ ಬಂದ ತಕ್ಷಣ ಮೈಲಿಗೆಯಾಗಿದೆ ಅಥವಾ ಸತ್ತವರು ಅಶುದ್ಧವಾಗಿದ್ದರು ಎಂದರ್ಥವಲ್ಲ. ಬದಲಿಗೆ ಇದಕ್ಕೂ ನಮ್ಮ ಪೂರ್ವಿಕರು ತಮ್ಮದೇ ಆದ ವೈಜ್ಞಾನಿಕ ಕಾರಣಗಳನ್ನು ಕಂಡುಕೊಂಡಿದ್ದರು. ಆದ್ದರಿಂದಲೇ ಸಾವಿನ ಮನೆಗೆ ಹೋಗಿ ಬಂದವರು ಸ್ನಾನ ಮಾಡಿದ ನಂತರವೇ ಮನೆಯನ್ನು ಪ್ರವೇಶಿಸಬೇಕು ಎಂದು ಹೇಳಲಾಗುತ್ತಿತ್ತು. ಸತ್ತವರು ನಮಗೆ ಎಷ್ಟೇ ಪ್ರೀತಿಯವರಿರಲಿ, ಸತ್ತ ನಂತರ ಅವರ ದೇಹ ಕೊಳೆಯಲಾರಂಭಿಸುತ್ತದೆ. ಉಸಿರಾಟ ನಿಲ್ಲಿಸಿ ಜೀವಂತ ವ್ಯಕ್ತಿ ಹೆಣ’ ಎಂದು ಕರೆಯಲ್ಪಡುತ್ತಿದ್ದಂತೆ ಅವರ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆ ಆಗಲಾರಂಭಿಸುತ್ತದೆ. ಜೊತೆಗೆ ಕ್ರಿಮಿಗಳು ಕೂಡಾ. ಇವುಗಳೇ ಮನುಷ್ಯನ ದೇಹ ಮಣ್ಣಿನಲ್ಲಿ ಪೂರ್ತಿಯಾಗಿ ಕರಗಲಿಕ್ಕೂ ಕಾರಣವಾಗುವುದು. ಇದು ಸೋಂಕು ಹರಡಲಿಕ್ಕೂ ಕಾರಣವಾಗಬಹುದು. ಇನ್ನು ದೇಹವನ್ನು ಸುಡುವಾಗಲೂ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದಲೇ ಸಾವಿನ ಮನೆಗೆ ಹೋಗಿ ಬಂದವರು ಹಾಗೇ ಮನೆಯೊಳಗೆ ಬಂದರೆ ಅವರಿಂದಾಗಿ ಮನೆಯಲ್ಲಿ ಸೋಂಕು ಹರಡಬಹುದು, ಅದು ಕಾಯಿಲೆಗೂ ಕಾರಣವಾಗಬಹುದು. ಅದೇ ನೇರವಾಗಿ ಮನೆ ಪ್ರವೇಶಿಸದೇ ಸ್ನಾನ ಮಾಡಿ ಬಂದರೆ ಬ್ಯಾಕ್ಟೀರಿಯಾಗಳು ದೂರವಾಗಬಹುದು ಎನ್ನುವ ವೈಜ್ಞಾನಿಕ ಕಾರಣಕ್ಕೇ ನಮ್ಮ ಪೂರ್ವಿಕರು ಸಾವಿನ ಮನೆಗೆ ಹೋಗಿ ಬಂದವರು ಸ್ನಾನ ಮಾಡಿದ ನಂತರವೇ ಮನೆಯನ್ನು ಪ್ರವೇಶಿಸಬೇಕು ಎನ್ನುವ ರೂಢಿಯನ್ನು ಬದುಕಿನ ಒಂದು ಭಾಗವಾಗಿಸಿದರು. ಹಾಗೇ ಇದಕ್ಕೆ ಮಾನಸಿಕವಾಗಿಯೂ ಇನ್ನೊಂದು ಕಾರಣವಿದೆ. ನಾವು ಯಾರ‌್ಯಾರದ್ದೋ ಅಂತಿಮ ದರ್ಶನ ಪಡೆಯಲಿಕ್ಕೆ ಹೋಗುವುದಿಲ್ಲ. ನಮ್ಮ ಬದುಕಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಂಪರ್ಕ ಇರುವವರು ನಮ್ಮನ್ನು ಅಗಲಿದಾಗ ಮಾತ್ರವೇ ನಾವು ಅವರ ಅಂತಿಮ ದರ್ಶನ ಪಡೆಯಲು ಹೋಗುತ್ತೇವೆ. ಪ್ರೀತಿಯವರು, ಆತ್ಮೀಯರು ಹಾಗೂ ಯಾವುದೇ ರೀತಿಯಲ್ಲಿ ಪರಿಚಿತರಾದವರ ಅಗಲಿಕೆ ನಮ್ಮ ಮನಸ್ಸಿನ ಸಂಕಟ, ಬೇಸರ, ದುಃಖ ಹಾಗೂ ವ್ಯಥೆಗೆ ಕಾರಣವಾಗುತ್ತದೆ. ಮನೆಗೆ ಮರಳಿದ ತಕ್ಷಣ ಸ್ನಾನ ಮಾಡಿದರೆ ಮನಸ್ಸು ಒಂದಿಷ್ಟು ಉಲ್ಲಸಿತಗೊಳ್ಳುತ್ತದೆ. ಮನಸ್ಸಿಗಾದ ನೋವು ಮರೆಯಾಗಿ ನಾವು ನಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳಲಿಕ್ಕೂ ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೂ ನಮ್ಮ ಪೂರ್ವಿಕರು ಸಾವಿನ ಮನೆಯಿಂದ ಬಂದ ತಕ್ಷಣ ಸ್ನಾನ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಿ ಎಂದು ಹೇಳುತ್ತಿದ್ದರು.

Related Books