ಡಾ. ಶ್ರೀನಿವಾಸ ಹಾವನೂರ ಸಂಪಾದಿಸಿರುವ ‘ಹರಿದಾಸರು ಸ್ತುತಿಸಿದ ಮಂತ್ರಾಲಯ ಮಠದ ಯತಿವರೇಣ್ಯರು’ ಕೃತಿ ಪ್ರಸ್ತುತ ಪೀಠಸ್ಥ ಶ್ರೀ ಸುಶಮೀಂದ್ರರ ವರೆಗೆ ಯತಿವರ್ಯರುಗಳ ಚರಿತ್ರ ಸಹಿತ ರಚಿತವಾಗಿದೆ. ಕೃತಿ ರಚನೆಯ ಕುರಿತು ಬರೆಯುತ್ತಾ ಸೋದೆಯ ಶ್ರೀವಾದಿರಾಜ ಯತಿಗಳನ್ನೂ ಸವಣೂರಿನ ಶ್ರೀ ಸತ್ಯಬೋಧತೀರ್ಥರನ್ನೂ ಸ್ತುತಿಸಿದಂಥ ಹರಿದಾಸರುಗಳ ಹಾಡುಗಳ ಸಂಗ್ರಹಗಳನ್ನು ಹೊರತಂದ ಮೇಲೆ, ಮಂತ್ರಾಲಯ ಮಠದ ಯತಿವರ್ಯರುಗಳ ಮೇಲಿನ ಹಾಡುಗಳನ್ನು ಹುಡುಕುತ್ತಾ ಇದ್ದೆ. ಮಾಧ್ವಯತಿ ಪರಂಪರೆಯಲ್ಲಿ ಅನೇಕಾನೇಕ ಮಹಾಮಹಿಮರು ಆಗಿಹೋದರೂ, ಅವರೆಲ್ಲರ ಮೇಲೆಯೂ ಹಾಡುಗಳು ರಚಿತವಾಗಿಲ್ಲ. ಅದಕ್ಕೆ ಇಂಥದ್ದೇ ಕಾರಣವೆಂಬುದಿಲ್ಲ. ಸುದೈವಕ್ಕೆ ಲಕುಮೀಶ ಮುದ್ರಿಕೆಯ ಕೀರ್ತನ ಸಂಗ್ರಹ ದೊರಕಿತು. ಶ್ರೀಮಂತ್ರಾಲಯ ಮಠದ ಬಹುತರ ಎಲ್ಲ ಯತಿಗಳ ಮೇಲೆ ಅವರ ಕೃತಿಗಳಿದ್ದವು. ಜೊತೆಗೆ ಶ್ರೀ ವಿಜಯದಾಸರಿಂದ ಹಿಡಿದು, ಇಪ್ಪತ್ತನೆಯ ಶತಮಾನದ ಇನ್ನು ಹಲವು ಹರಿದಾಸರ ರಚನೆಗಳೂ ಇದ್ದವು. ಅವನ್ನೆಲ್ಲಾ ಸಂಗ್ರಹಿಸಿ ಕೊಟ್ಟಿದ್ದಾದರೆ ಮಂತ್ರಾಲಯ(ವಿದ್ಯಾ) ಮಠದ ಒಂದು ಪೂರ್ಣ ಚಿತ್ರಣವೇ ದೊರೆಯುವುದಲ್ಲ. ಹಾಗೇ ಯೋಚಿಸಿ ಸಂಪಾದಿಸತೊಡಗಿದೆ. ಈ ಯತ್ನದಲ್ಲಿ ಮೊದಲಿನಿಂದ ನನಗೆ ಆಸರೆ ಇತ್ತವರು ವಿದ್ವಾನ್ ಶ್ರೀ ಕುರಡಿ ಅನಂತಾಚಾರ್ಯರು. ಇವರು ಇನ್ನಾರು ಅಲ್ಲ: ಲಕುಮೀಶರ ತಮ್ಮ. ಅದರಂತೆ ಕೀರ್ತನೆಗಳ ಪಠ್ಯವನ್ನು ಶ್ರೀ.ಎ.ಎನ್. ಅನಂತಸ್ವಾಮಿರಾಯರು ಪರಿಷ್ಕರಿಸಿ ಕೊಟ್ಟಿದ್ದಾರೆ. ಆಮೇಲೆ ಕೀರ್ತನೆಗಳನ್ನು ಪ್ರತಿಮಾಡಿ ಹೊಂದಿಸಿ ಕೊಡುವ ಕಾರ್ಯದಲ್ಲಿ ನೆರವಾದವರು ಶ್ರೀ.ಸಿ.ಎಸ್. ಗೋವಿಂದರಾಯರು. ಕೆಲವು ಯತಿವರ್ಯರನ್ನು ಸ್ತುತಿಸಿದ್ದ ಹಾಡುಗಳು ಇವೆಯೆಂದು ಕೇಳಿದ್ದೆ. ದೊರೆತಿರಲಿಲ್ಲ. ಅಂಥ ಅಪೂರ್ವ ಹಾಡುಗಳನ್ನು ಶ್ರೀ.ಎ.ವಿ. ಪಂಚಮುಖೆ ಹಾಗೂ ಶ್ರೀ ರಾಜಾ ಜಿ. ಪವಮಾನಾಚಾರ್ಯರು ಒದಗಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಶ್ರೀನಿವಾಸ ಹಾವನೂರು.
©2024 Book Brahma Private Limited.