ಪಾಕಿಸ್ತಾನದಲ್ಲಿ ಹುಟ್ಟಿದ ಜಿಯಾವುದ್ದೀನ್ ಸರ್ದಾರ್ ಅವರು ಇಂಗ್ಲೆಂಡ್‌ನಲ್ಲಿ ಶಿಕ್ಷಣ ಮುಗಿಸಿ ಸದ್ಯ ಅಲ್ಲಿಯೇ ನೆಲೆಸಿದ್ದಾರೆ. ದೇಶ ಸುತ್ತಿ ಕೋಶ ಓದಿ ಬಹುಶ್ರುತರಾದ ಅವರು ತೀಕ್ಷ್ಣ ವೈಚಾರಿಕತೆಯ ಜೊತೆಗೆ ಕಲಾವಿದನ ಸೂಕ್ಷ್ಮಜ್ಞತೆ ಮೈಗೂಡಿಸಿಕೊಂಡವರು. ಉತ್ತಮ ಚಿಂತಕರಾಗಿರುವ ಜಿಯಾ ಅವರು ಶ್ರದ್ಧಾವಂತ ಮುಸ್ಲಿಮನೂ ಹೌದು. ಧಾರ್ಮಿಕ ಶ್ರದ್ಧೆ ಮತ್ತು ಧಾರ್ಮಿಕ ಮೂಲಭೂತವಾದಗಳ ನಡುವೆ ವ್ಯತ್ಯಾಸವೇ ಇಲ್ಲ ಎಂಬಂತೆ ಮುಸ್ಲಿಮ್ ಸಮುದಾಯವನ್ನು ಸಾರಾಸಗಟಾಗಿ ’ಮೂಲಭೂತವಾದಿ’ ಎಂದು ಆರೋಪಿಸಲಾಗುತ್ತದೆ. ಹೀಗಿರುವಾಗ ಜಿಯಾ ಅವರು, ತನ್ನ ಕೃತಿಯ ಶೀರ್ಷಿಕೆಯಲ್ಲೇ ತಾನು ಓರ್ವ ಸಂದೇಹಿ ಮುಸ್ಲಿಮ್ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗುತ್ತದೆ.
ಅಮೇರಿಕಾ, ಇಂಗ್ಲೆಂಡ್, ಟರ್ಕಿ, ಸೌದಿ ಅರೇಬಿಯಾ, ಈಜಿಪ್ಟ್, ಇರಾಕ್, ಸಿರಿಯ, ಜೋರ್ಡಾನ್, ಪಾಕಿಸ್ತಾನ, ಚೀನಾ, ಮಲೇಶಿಯಾ ಮೊದಲಾದ ದೇಶಗಳಲ್ಲಿ ಸುತ್ತಾಡಿರುವ ಅವರು ಜಾಗತಿಕ ಮುಸ್ಲಿಮ್ ಸಮುದಾಯದ ವೈವಿಧ್ಯಮಯ ಬದುಕನ್ನೂ ಇಸ್ಲಾಂನ ಬಹುವಚನಿ ಸ್ವರೂಪವನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇಸ್ಲಾಮಿನ ಪವಿತ್ರ ಗ್ರಂಥ ಕುರಾನ್ ಶರೀಫ್‌ಗೆ ಇರುವುದು ಒಂದೇ ವ್ಯಾಖ್ಯೆ ಮತ್ತು ಅದು ಪ್ರಶ್ನಾತೀತ- ಎಲ್ಲ ಕಾಲಗಳಲ್ಲಿಯೂ, ಎಲ್ಲ ದೇಶಗಳಲ್ಲಿಯೂ- ಎಂಬ ಮೂಲಭೂತವಾದಿ ಹಠ ಈಗ ಎಲ್ಲೆಡೆ ಹರಡಿದೆ. ಅದು ಹಿಂಸ್ರವೂ ಅಪ್ರಜಾಸತ್ತಾತ್ಮಕವೂ ಆಗಿರುವ ಆಧುನಿಕ ವಿದ್ಯಮಾನವಾಗಿದೆ. ಇಸ್ಲಾಂನ ಬಹುಮುಖಿ ಜ್ಞಾನಪರಂಪರೆಗೆ ಈ ನಿಲುವು ವಿರುದ್ಧವಾಗಿದೆ ಎಂಬುದು ಲೇಖಕರ ಅಭಿಪ್ರಾಯ.
ಮೂಲಭೂತವಾದ ಎಲ್ಲ ಮತಧರ್ಮಗಳಲ್ಲಿಯೂ ತಲೆದೋರಿರುವ ಹಿನ್ನೆಲೆಯಲ್ಲಿ ಜಿಯಾ ತನ್ನ ಧರ್ಮದ ಬಗ್ಗೆ ಆತ್ಮವಿಮರ್ಶೆಯ ವಿಷಾದದ ಮಾತುಗಳು, ಎಲ್ಲ ಧಾರ್ಮಿಕ ಸಮುದಾಯಗಳಿಗೂ ಅನ್ವಯಿಸುವ ಹಾಗಿವೆ.
©2024 Book Brahma Private Limited.