‘ಭಾರತೀಯ ಹಬ್ಬಗಳು ’ ಕೃತಿಯು ಸತ್ಯವತಿ ರಾಮನಾಥ ಅವರ ಲೇಖನಸಂಕಲನವಾಗಿದೆ. ಕೃತಿಯು ಸನಾತನ ವಿಚಾರವನ್ನು ತಿಳಿಸುತ್ತದೆ. ಸನಾತನವಾಗಿ ಬಂದಂತಹ ಹಿಂದೂ ಧರ್ಮದಲ್ಲಿ ಸಂಸ್ಕೃತಿಯನ್ನು ಬಿತ್ತರಿಸುವ, ಸುಖ, ಸಂತೋಷ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದಾದ ಅನೇಕ ಅರ್ಥಪೂರ್ಣ ಸುವಿಚಾರಗಳಿಂದ ಕೂಡಿರುವ ಹಬ್ಬಗಳು ಇದೆ. ಆದರೂ ಅದರ ಅಂತರಾರ್ಥದ ಅರಿವಿಲ್ಲದೆ, 'ಅಯ್ಯೋ ಇವೆಲ್ಲ ಕೆಲಸಕ್ಕೆ ಬಾರದ ಹಬ್ಬಗಳು, ಯಾಕೆ ಇದನ್ನೆಲ್ಲಾ ಆಚರಿಸಬೇಕು, ಮೂಢನಂಬಿಕೆ' ಎಂದು ಮೂಗು ಮುರಿಯುವವರಿಗೆ ಈ ಕೃತಿ ಮಾರ್ಗದರ್ಶನ ಮಾಡಬಲ್ಲದು. ಸತ್ಯವತಿಯವರು ಸಂಸ್ಕೃತ ವಿದ್ವಾಂಸರು, ಹಿಂದೂ ಧರ್ಮದ ಆಳವನ್ನು ತಿಳಿದವರು. ನಾವು ಹಬ್ಬಗಳನ್ನು ಏಕೆ ಆಚರಿಸುವುದು, ಅದರಲ್ಲಿ ಸಿಗುವ ಸುಖ-ಸಂತೋಷ, ನೆಮ್ಮದಿ, ಆನಂದ ಮಾತ್ರವಲ್ಲ, ಇದು ಇಹಪರಗಳೆರಡರ ಸಾಧನೆಗೆ ಒಳಿತೆಂಬುದನ್ನು ಗ್ರಹಿಸಿ ಪ್ರಾಯಶಃ ಈ 'ಭಾರತೀಯ ಹಬ್ಬಗಳು' ಕೃತಿಯನ್ನು ರಚಿಸಿದ್ದಾರೆ ಎಂದು ಅನಿಸುತ್ತದೆ. ಯುಗಾದಿ, ಬಲಿಪಾಡ್ಯಮಿ, ಗೌರಿ ಗಣೇಶ, ನವರಾತ್ರಿ ಎಂದು ಎಲ್ಲ ಹಬ್ಬಗಳ ವಿವರವನ್ನೂ ವಿಷದವಾಗಿ ತಿಳಿಸಿರುವುದಲ್ಲದೆ ಬೇವು, ತುಲಸಿ, ಬಿಲ್ವಪತ್ರೆ, ವೀಳೆದೆಲೆ, ದರ್ಭೆಹುಲ್ಲು, ಶಮೀಪತ್ರೆಗಳ ವಿವರ, ಅರಿಶಿನ, ಕರ್ಪೂರ, ಮಂತ್ರಾಕ್ಷತೆಗಳ ಬಳಕೆಯನ್ನೂ ತಿಳಿಸಿರುತ್ತಾರೆ. ಇಷ್ಟು ಮಾತ್ರವಲ್ಲ ಮಕ್ಕಳಿಗೆ ಕಲಿಯಲು ಯೋಗ್ಯವಾದ ವಾರದ ದಿನಗಳು, ಋತುಗಳು, ನಕ್ಷತ್ರಗಳು, ಷೋಡಶ ಸಂಸ್ಕಾರಗಳು ಎಂದು ಬಹು ಮುಖ್ಯವಾದ ವಿಚಾರಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.