‘ಸೌಂದರ್ಯಲಹರೀ’ ಕೆ. ಗಣಪತಿ ಭಟ್ಟ ಅವರ ಸ್ತೋತ್ರಗಳ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅದೈತತತ್ತ್ವವನ್ನು ಸಾಂದರ್ಭಿಕವಾಗಿ ಪ್ರಸಾರ ಮಾಡಿದ ಮಹಾಮಹಿಮರು ಆಚಾರ್ಯ ಶಂಕರರೆಂಬ ಮಾತು ಅದೈತದಷ್ಟೇ ಸತ್ಯ. ಅದೈತ ಮತ ಪ್ರತಿಷ್ಠಾಪನಾಚಾರ್ಯರೆಂಬ ಬಿರುದನ್ನು ಶ್ರೀಶಂಕರರಿಗೆ ಹೇಳುವುದು ಅಷ್ಟೊಂದು ಸರಿ ಎನಿಸದು. ಕಾರಣ ಅವರಿಗಿಂತ ಮೊದಲೇ ಅದೈತ ತತ್ತ್ವವಿತ್ತು. ಅಧರ್ಮಗಳ ಹಾವಳಿಯನ್ನು ತಡೆಯಲಾರದೇ ಶಠಂ ಪ್ರತಿ ಶಾರ್‍ಯಂ ಎನ್ನುವಂತೆ ತಾವೇ ಬುದ್ದಿವಂತರೆಂದು ಹೇಳಿಕೊಳ್ಳುವನಾಸ್ತಿಕರನ್ನು ಅವರದೇ ಭಾಷೆಯಲ್ಲಿ ಕಟುವಾಗಿ ಖಂಡಿಸಿ, ಸುಷುಪ್ತವಾಗಿರುವ ತತ್ತ್ವವನ್ನು ಪುನಃ ಜಾಗೃತಗೊಳಿಸಿ, ಅದೈತ ಡಿಂಡಿಮವನ್ನು ಬಾರಿಸಿದರು. ಸಮಗ್ರ ಭಾರತದೇಶವನ್ನು ಸಂಚರಿಸಿ, ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಹೆಚ್ಚಿಸಿ, ಅದೆಷ್ಟೋ ಮೂಢನಂಬಿಕೆಯಂತಿರುವ ಆಚರಣೆಗಳಿಗೆ ತಮ್ಮೋಪದೇಶಗಳಿಂದ ಪುಟಗೊಳಿಸಿ ಪ್ರಸ್ಥಾನತ್ರಯಕ್ಕೆ ತಮ್ಮದೇ ಆದ ವಿಶಿಷ್ಟ ಸಂಸ್ಕೃತ ಶೈಲಿಯಲ್ಲಿ ಭಾಷ್ಯವನ್ನು ಬರೆದರು. ಮಂದಮತಿಗಳಾದ ಪಾಮರರಿಗೆ ತಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ದೇವತೆಗಳನ್ನೊಳಗೊಂಡ 42 ಸ್ತೋತ್ರಗಳನ್ನು ರಚಿಸಿದರು. ವೇದಾಂತ ತತ್ತ್ವಗಳನ್ನು ಕಾವ್ಯಮಯವಾಗಿ, ಪದ್ಯಮಯವಾಗಿ ತಿಳಿಸಿದರು. ಅವರು ರಚಿಸಿದ ಸ್ತೋತ್ರಮೂರ್ತಿಗೆ ಮುಕುಟಪ್ರಾಯವಾಗಿದ್ದು ಸೌಂದರ್ಯಲಹರಿ ಸ್ತೋತ್ರ. ಸೌಂದರ್ಯಲಹರಿಯಲ್ಲಿ ಆಚಾರ್ಯ ಶಂಕರರು ಲಲಿತಾದೇವಿಯ ಸೌಂದರ್ಯವನ್ನು ವಿವಿಧ ಭಂಗಿಗಳಿಂದ ವರ್ಣಿಸುತ್ತಾರೆ. ಅವರ ಕಲ್ಪನಾಸಾಮ್ರಾಜ್ಯದಲ್ಲಿ ದೇವಿಯ ಅವಯವಗಳನ್ನು ಆಧ್ಯಾತ್ಮಿಕ ಹಾಗೂ ದೈವಿಕ ಶಕ್ತಿಯನ್ನಾಗಿ ಪರಿವರ್ತಿಸಿ ವರ್ಣಿಸುತ್ತಾರೆ. ಸೌಂದರ್ಯಲಹರೀ ಸ್ತೋತ್ರವನ್ನು ಭಾವಪರವಶವಾಗಿ ಶಂಕರಾಚಾರ್ಯರು ಹಾಡಿದ ಬಗ್ಗೆ ಒಂದು ಹಿನ್ನೆಲೆಯೂ ಇದೆ. ಆಚಾರ್ಯರ ತಂದೆ ಶಿವಗುರು ಅವರು ಒಮ್ಮೆ ತಾವು ಭಗವತಿಯ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೆ ಬಾಲಕ ಶಂಕರನನ್ನು ಕಳುಹಿಸುತ್ತಾರೆ. ಬಾಲಕನು ಹಾಲನ್ನು ತೆಗೆದುಕೊಂಡು ದೇವಿಯ ವಿಗ್ರಹದ ಮುಂದೆ ಮುಗ್ಧನಾಗಿ ನಿಂತು, ಹಾಲನ್ನು ಕುಡಿಯುವಂತೆ ಪ್ರಾರ್ಥಿಸುತ್ತಾನೆ. ಆದರೆ ದೇವಿಯು ಹಾಲನ್ನು ಸ್ವೀಕರಿಸದಿದ್ದಾಗ ಗದ್ಗದಕಂಠದಿಂದ ಅಳುತ್ತಾನೆ.
©2025 Book Brahma Private Limited.