ಇಸ್ಲಾಂ ಧರ್ಮ ಜಗತ್ತಿನಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣ, ಅದು ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಯಿತು ಎನ್ನುವುದನ್ನು ಹಲವು ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ. ಇಸ್ಲಾಮ್ ಧರ್ಮ ಪರಿಸರದ ಬಗ್ಗೆ ಯಾವ ರೀತಿಯ ಧೋರಣೆಯನ್ನು ಹೊಂದಿದೆ ಎನ್ನುವುದನ್ನು ಈ ಕೃತಿ ವಿವರಿಸುತ್ತದೆ. ಈ ಕೃತಿಯನ್ನು ಅಬ್ದುಲ್ ರಝಾಕ್ ಕಮಾರ ಅನುವಾದಿಸಿದ್ದಾರೆ. ಇಸ್ಲಾಮ್ ಧರ್ಮದಲ್ಲಿ ಪರಿಸರದ ಬಹುಮುಖ್ಯ ಭಾಗವಾಗಿ ಮನುಷ್ಯನನ್ನು ಸೇರ್ಪಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಮನುಷ್ಯನ ಏಳಿಗೆಯ ಜೊತೆಗೇ ಪ್ರಕೃತಿಯ ಮೇಲೆ ಅವನಿಗಿರುವ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ. ಲೇಖಕರು ಈ ಹಿನ್ನೆಲೆಯಲ್ಲಿ ಕುರ್‌ಆನಿನ ಬೇರೆ ಬೇರೆ ಅಧ್ಯಾಯಗಳಲ್ಲಿರುವ ಶ್ಲೋಕಗಳನ್ನು ಮುಂದಿಡುತ್ತಾರೆ. ಪ್ರಕೃತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಇಸ್ಲಾಮ್ ಹೇಗೆ ವಿರೋಧಿಸುತ್ತದೆ ಎನ್ನುವುದನ್ನೂ ಕೃತಿಯಲ್ಲಿ ವಿವರಿಸುತ್ತಾರೆ. ಒಂದು ಬೀಜವನ್ನು ಬಿತ್ತುವುದು ಅಥವಾ ಸಸಿಯನ್ನು ನೆಡುವುದು ಅತ್ಯಂತ ದೊಡ್ಡ ಪ್ರತಿಫಲಾರ್ಹ ಕಾರ್ಯವಾಗಿದೆ. ಒಂದು ಪಕ್ಷಿ, ಮನುಷ್ಯ ಅಥವಾ ಮೃಗಗಳು ಅದರ ಫಲಗಳನ್ನು ತಿಂದರೂ ಅದರ ಪ್ರತಿಫಲವು ಆತನಿಗೆ ಲಭಿಸುತ್ತದೆ ಎಂಬ ಪ್ರವಾದಿ ವಚನವನ್ನು ಲೇಖಕರು ವಿವರಿಸುತ್ತಾರೆ. ಇಂತಹ ಹತ್ತುಹಲವು ವಚನಗಳನ್ನು ಮುಂದಿಡುತ್ತಾ ಪರಿಸರ ರಕ್ಷಣೆಯ ಅಗತ್ಯವನ್ನು ಲೇಖಕರು ಹೇಳುತ್ತಾರೆ. ಪರಿಸರ ರಕ್ಷಣೆಯೆಂದರೆ ಸ್ವತಃ ಮನುಷ್ಯ ತನಗೆ ತಾನೇ ಮಾಡಿಕೊಳ್ಳುವ ರಕ್ಷಣೆ ಎನ್ನುವುದನ್ನು ಸರಳವಾಗಿ ಲೇಖಕರು ವ್ಯಾಖ್ಯಾನಿಸುತ್ತಾರೆ.
©2024 Book Brahma Private Limited.