ಕಥೆಗಾರ ಮಚ್ಛೇಂದ್ರ ಅಣಕಲ್ ಅವರ ಆಯ್ದ ಉತ್ತಮ ಕಥೆಗಳ ಸಂಕಲನ-‘ದಲಿತ ಸಂವೇದನೆಯ ಕತೆಗಳು’ ಈ ಕೃತಿಯನ್ನುಸಂಪಾದಿಸಿದ್ದು ಪತ್ರಕರ್ತ, ಬರಹಗಾರ ರಾಜೇಂದ್ರ ಎಲ್ ಗೋಖಲೆ. ಮಚ್ಛೇಂದ್ರ ಅಣಕಲ್ ಅವರ ವಿವಿಧ ಕಥಾ ಸಂಕಲನದಿಂದ ಒಟ್ಟು 15 ಕಥೆಗಳನ್ನು ಆಯ್ದುಕೊಳ್ಳಲಾಗಿದೆ. ಎಲ್ಲ ಕತೆಗಳಲ್ಲಿ ದಲಿತ ಜನಾಂಗದ ನೋವಿನ ಚಿತ್ರಣವಿದೆ. ಬಡತನ, ಅನಕ್ಷರತೆ, ಮತ್ತು ಕೂಲಿ ಕಾರ್ಮಿಕರ ಸ್ಥಿತಿ- ಗತಿ ಹಾಗೂ ಜಾತಿ ತಾರತಮ್ಯದ ವಿರುದ್ಧದ ತಣ್ಣನೆಯ ಬಂಡಾಯದ ಕತೆಗಳು ಇಲ್ಲಿ ಹೆಣೆಯಲ್ಪಟ್ಟಿವೆ. ಪ್ರಮುಖವಾಗಿ ಡಾಂಬಾರು ದಂಧೆ, ಲಾಟರಿ,ಸೂಲಗಿತ್ತಿ, ಪಾಳು ಬಿದ್ದ ಭೂಮಿ, ಬೀರನ ಎಲೇಕ್ಷನ್, ಮೊದಲ ಗಿರಾಕಿ, ಫಲಿತಾಂಶದ ಸುತ್ತ, ಹುಡುಬಿ ಸರ್ಕಲ್ ನಲ್ಲಿ ಒಂದು ರಾತ್ರಿ, ಸ್ವಾಭಿಮಾನಿ, ಒಂದು..ಎರಡು..ಮೂರು.. ಮಗುವಿನ ಹಸಿವು, ಶಿಕ್ಷಣೆಂಬೋ ಬಿ.ಎಡ್ಡು ಮಾಸ್ತರೆಂಬೋ ಮಾಂತ್ಯ ಇತ್ಯಾದಿ ಕತೆಗಳಿವೆ. ಇಲ್ಲಿಯ 'ಡಾಂಬಾರು ದಂಧೆ ' ಎಂಬ ಕತೆ 2010 ರಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕತೆ ಈ ಸಂಕಲನದಲ್ಲಿ ಒಳಗೊಂಡಿರುವುದು ವಿಶೇಷವಾಗಿದೆ. ಇಲ್ಲಿಯ ಬಹುತೇಕ ಕತೆಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದು ತುಷಾರ, ತರಂಗ,ಕರ್ಮವೀರ, ಉದಯವಾಣಿ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ.
ಕೃತಿಗೆ ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರು ಹಿನ್ನುಡಿ ಬರೆದು ದಲಿತ ಸಂವೇದನೆಯ ಕಥೆಗಳನ್ನು ಆಯ್ದು ಪ್ರಕಟಿಸಿದ್ದು, ದಲಿತರ ನೋವುಗಳ ತೀವ್ರತೆಯನ್ನು ಒಂದೆಡೆ ಕಟ್ಟಿ ಕೊಟ್ಟಿದ್ದು ಈ ಕೃತಿಯ ಹೆಚ್ಚುಗಾರಿಕೆ ಎಂದು ಬಣ್ಣಿಸಿದ್ದಾರೆ.
©2024 Book Brahma Private Limited.