‘ಶತಮಾನದ ಕನ್ನಡ ಸಾಹಿತ್ಯ’ ಸಮೀಕ್ಷಾ ಸಂಪುಟ-2 ಹಿರಿಯ ವಿಮರ್ಶಕರಾದ ಜಿ.ಎಚ್. ನಾಯಕ ಅವರು ಸಂಪಾದಿಸಿರುವ ಕೃತಿ. ಈ ಕೃತಿಯ ಕುರಿತು ಬರೆದಿರುವ ಅವರ ‘ಶತಮಾನದ ಕನ್ನಡ ಸಾಹಿತ್ಯ ಸಮೀಕ್ಷೆ ಮೊದಲ ಸಂಪುಟದಂತೆಯೇ ಈ ದ್ವಿತೀಯ ಸಂಪುಟವೂ ಸಾಹಿತಿಗಳಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ. ಯಾರೇ ಇಂಥ ಸಮೀಕ್ಷಾ ರೂಪದ ಲೇಖನಗಳನ್ನು ಬರೆದರೂ ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಓದುಗರ ಸರ್ವಾನುಮತದ ಒಪ್ಪಿಗೆ ಪಡೆದು ಅಥವಾ ಸರ್ವಾನುಮತದ ಒಪ್ಪಿಗೆ ನಿರೀಕ್ಷಿಸಿ ಸಾಹಿತ್ಯ ವಿಮರ್ಶೆಯ ಲೇಖನಗಳನ್ನು ಬರೆಯಲಾಗುವುದಿಲ್ಲ. ಯಾರೋ ಒಬ್ಬರೋ ಇಬ್ಬರೂ ವಿಮರ್ಶಕರ ವಿಮರ್ಶೆಯ ಲೇಖನಗಳಿಂದ ಒಂದು ಕೃತಿಯ ಮೌಲ್ಯವೊ ಸಾಹಿತಿಯ ಮಹತ್ವವೊ ತೀರ್ಮಾನವಾಗುವುದೂ ಇಲ್ಲ. ಸಾಹಿತ್ಯ ವಿಮರ್ಶೆಯ ಹಾಗು ಸಾಹಿತ್ಯ ಚರಿತ್ರೆಯ ಬರವಣಿಗೆ ನಿರಂತರವಾಗಿ ನಡೆಯುತ್ತಲೇ ಹೋಗುವ, ಹಾಗು ನಡೆಯುತ್ತಲೇ ಹೋಗಬೇಕಾದ ಕ್ರಿಯೆ. ಉತ್ತಮ ಕೃತಿ ಹಾಗೂ ಸತ್ವಶಾಲಿಯಾದ ಸಾಹಿತಿ ಕಾಲಕಾಲಕ್ಕೆ ಮರುಮೌಲ್ಯಮಾಪನಕ್ಕೆ ಒಳಗಾಗುತ್ತಲೇ ಇರಬೇಕಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ; ಎಲ್ಲ ಕ್ಷೇತ್ರಗಳಲ್ಲಿಯೂ ವಿಮರ್ಶೆಯನ್ನು ಸಹಿಸದ ಸಂಸ್ಕೃತಿ, ಒಪ್ಪಿಗೆಯಾಗದಿರುವುದನ್ನು ಕುರಿತು ಸಲ್ಲದ ರೀತಿಯಲ್ಲಿ ವರ್ತಿಸದೆ ಗಂಭೀರವಾಗಿ ಚರ್ಚಿಸುವ ಸಂಸ್ಕೃತಿ ನಶಿಸದಂತೆ ಎಚ್ಚರವಹಿಸಬೇಕಾಗಿದೆ. ಪ್ರಜಾಸತ್ತಾತ್ಮಕ ಮನೋಧರ್ಮವನ್ನು ಎಲ್ಲ ಕ್ಷೇತ್ರಗಳಲ್ಲಿಯೂ, ನಮ್ಮ ಚಟುವಟಿಕೆಗಳಲ್ಲಿಯೂ ಬೆಳೆಸಬೇಕಾಗಿದೆ. ಅದು ಎಲ್ಲ ಪ್ರಜ್ಞಾವಂತರ ಕರ್ತವ್ಯವಾಗಿದೆ’ ಎಂದಿದ್ದಾರೆ ಕೃತಿಯ ಸಂಪಾದಕ ಜಿ. ಎಚ್. ನಾಯಕ.
©2024 Book Brahma Private Limited.