ಶ್ರೀನಿವಾಸ ಹಾವನೂರ ಅವರು ಸಂಪಾದಿಸಿರುವ ಕೃತಿ ‘ಮಾತಂಗಿ ಮತ್ತು ಇತರ ಕಾದಂ ಕಥನಗಳು’. ಕೃತಿಯ ಕುರಿತು ವಿವರಿಸುತ್ತಾ ‘ಕಾದಂ-ಕಥನ’ವೆಂಬುದು ಕನ್ನಡದಲ್ಲಿ ಒಂದು ನವೀನ ಸಾಹಿತ್ಯರೂಪ ಎಂದಿದ್ದಾರೆ ಶ್ರೀನಿವಾಸ ಹಾವನೂರ. ಹಾಗೇ ಇದು ಕಾದಂಬರಿಯ ಡೈಜೆಸ್ಟ್ ಅಥವಾ ಸಾರಾಂಶವಲ್ಲ. ಇಂಗ್ಲಿಷ್ ನಲ್ಲಿಯ ಮ್ಯಾಕ್ಮಿಲನ್ ಸೀರೀಸ್ ನಂತೆ, ಎಳೆಯರಿಗಾಗಿ ಬರೆದ ಕಥಾಸಾರವಲ್ಲ, ಬದಲಾಗಿ ಕಾದಂಬರಿಯೊಂದರ ಕತೆಯ ಮೆಯ್ಗೆಡಲೀಯದ ಅದರ ಕೆಲವು ಹೃದ್ಯವಾದ ಸನ್ನಿವೇಶಗಳನ್ನು ಯಥಾವತ್ತಾಗಿ ಕೊಡುತ್ತ. ಆ ಮೂಲಕ ಹೇಳಲಾದ ಕಥನವಿದು. ಕಾದಂಬರಿ ಕನ್ನಡದ್ದೇ ಆದರೆ, ಕಾದಂಬರಿಕಾರರ ನುಡಿಕಟ್ಟನ್ನೇ ಚಾಚೂ ತಪ್ಪದಂತೆ ಇಟ್ಟುಕೊಳ್ಳುವುದು ಸಾಧ್ಯ. ಆಗ ಮೂಲ ಕೃತಿಯನ್ನೇ ಸಂಕ್ಷೇಪದಲ್ಲಿ ಓದಿದಂತಾಗಿ ರಸಾನುಭವ ಪಡೆಯುವುದು ಒಂದು ವಿಶೇಶವೇ ಸೈ ಎಂದಿದ್ದಾರೆ. ಕಾದಂ-ಕಥನದಲ್ಲಿ ಕಾದಂಬರಿಯ ಆದಿ-ಮಧ್ಯ-ಅಂತ್ಯವನ್ನು ಉಳಿಸಿಕೊಳ್ಳುವುದು ಕ್ರಮಪ್ರಾಪ್ತವಾದುದು. ಕೆಲವು ಕಾದಂಬರಿಗಳಲ್ಲಿ ಹಾಗೇ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಂಥ ಕೃತಿಯ ಪೂರ್ವಾರ್ಧದ ಇಲ್ಲವೇ ಉತ್ತರಾರ್ಧದ ಕಥಾಭಾಗವಷ್ಟನ್ನೇ ತೆಗೆದುಕೊಳ್ಳಬೇಕಾದೀತು. ಇನ್ನು ಕೆಲವೆಡೆ ಕಾದಂಬರಿಯ ವಿಶಿಷ್ಟ ಪಾತ್ರವೊಂದನ್ನು ತೆಗೆದುಕೊಂಡು ಆ ವ್ಯಕ್ತಿಗೆ ಸಂಬಂಧಿಸಿದಷ್ಟೇ ಕಥಾಭಾಗ ಮತ್ತು ಸನ್ನಿವೇಶಗಳನ್ನು ಆಯ್ದುಕೊಳ್ಳಬಹುದು. ಭೈರಪ್ಪನವರ ದಾಟು ಕಾದಂಬರಿಯಿಂದ ಹೆಣೆಯಲಾದ ಮಾತಂಗಿ ಇದಕ್ಕೆ ಸೂಕ್ತವಾದ ಉದಾಹರಣೆ. ಕಾದಂ-ಕಥನದ ಎಲ್ಲ ಲಕ್ಷಣಗಳು ಅತ್ಯಂತ ಸೊಗಸಾಗಿ ಇದರಲ್ಲಿ ತೋರಿಬರುವವಾದ್ದರಿಂದ ಈ ಸಂಗ್ರಹದ ಶೀರ್ಷಿಕೆಯಲ್ಲಿ ಅದನ್ನು ಪ್ರಮುಖವಾಗಿ ಕಾಣಿಸಿದೆ ಎಂದು ವಿವರಿಸಿದ್ದಾರೆ.
©2024 Book Brahma Private Limited.