‘ಗೀತಾ ನಾಗಭೂಷಣ: ಮಹಿಳಾ ಮಾರ್ಗ’ ನಾಡೋಜ ಗೀತಾ ನಾಗಭೂಷಣ ಅವರ ಬದುಕು ಬರಹಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಹಿರಿಯ ಲೇಖಕಿ ಡಾ. ಕೆ.ಷರೀಫಾ ಹಾಗೂ ಬಸವರಾಜ ಸೂಳಿಭಾವಿ ಸಂಪಾದಿಸಿದ್ದಾರೆ. ಎರಡು ದಶಕಗಳಿಂದ ಬರೆಯುತ್ತಿರುವ ಗೀತಾ ಅವರು ಉಳಿದ ಸಹ ಕತೆಗಾರ್ತಿಯರಿಗಿಂತ ಭಿನ್ನ ಅನಿಸುವುದು ಎಲ್ಲಿ? ಹೆಚ್ಚಿನ ಕತೆಗಾರ್ತಿಯರು ಮಧ್ಯಮವರ್ಗದ ಹೆಂಗಳೆಯರ ಅನುಭವ ಜಗತ್ತನ್ನು, ಸ್ತ್ರೀವಾದಿ ಹಠಗಳಿಂದ ಶೋಧಿಸುವವರು. ಈ ಬಗೆಯ ಶೋಧನೆಯು ತನ್ನ ಸೂಕ್ಷ್ಮತೆಯನ್ನು, ಪ್ರಬುದ್ಧತೆಯನ್ನು ವೈದೇಹಿಯವರ ಅಕ್ಕುವಿನಂಥ ಕತೆಗಳಲ್ಲಿ ತಲುಪಿದೆ. ಗೀತಾ ಅವರ ಕತೆಗಳನ್ನು ಕಂಡಾಗ ಇವು ಸ್ತ್ರೀವಾದವನ್ನು ಆವಾಹಿಸಿಕೊಂಡು ಹುಟ್ಟಿದವುಗಳಲ್ಲ ಎನಿಸುತ್ತದೆ, ಇದಕ್ಕೆ ಕಾರಣ, ಅವರ ಕತೆಗಳ ಲೋಕವು ನಗರ ಹಳ್ಳಿಗಳ ಕೆಳವರ್ಗದ ದುಡಿವ ಸಮುದಾಯದ ಬದುಕಿಗೆ ಸಂಬಂಧಿಸಿರುವುದು ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದ ಲೇಖಕ ಡಾ. ರಹಮತ್ ತರೀಕೆರೆ.
ಗೀತಾ ನಾಗಭೂಷಣ ಅವರ ಕೃತಿಗಳ ಕುರಿತು ಮೆಚ್ಚುಗೆ ಸೂಚಿಸಿರುವ ಸಾಹಿತಿ ಎಲ್. ಹನುಮಂತಯ್ಯ, ಅರವತ್ತೆಂಟು ವಸಂತಗಳನ್ನು ಕಳೆದು ಲೇಖನಿಯಂತೆ ಮಾಗಿದ ಮನಸ್ಸನ್ನು ಹೊತ್ತಿರುವ ಗೀತಕ್ಕ ಕನ್ನಡ ನಾಡಿನ ಮಹಿಳೆಯರ ಹೆಮ್ಮೆ ಮಾತ್ರವಲ್ಲ, ವಿಚಾರವಂತ ಪುರುಷರ ಆತ್ಮಸಾಕ್ಷಿ ಕೂಡಾ ಹೌದು’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE