ನಾಗ ಐತಾಳ ಅವರು ಸಂಪಾದಿಸಿದ ಕೃತಿ-’ಕಾರಂತ ಚಿಂತನ ಕಡಲಾಚೆಯ ಕನ್ನಡಿಗರಿಂದ’. ಕಡಲಾಚೆಯ ಕನ್ನಡಿಗರಿಂದ ರೂಪಿತಗೊಂಡಿರುವ ಬರಹಗಳ ಕೊಂಡಿ ‘ಕಾರಂತ ಚಿಂತನ’ವಾಗಿದೆ. ಸಾಹಿತಿ ಪ್ರಕಾಶ್ ಹೇಮಾವತಿ ಹೆಗಡೆ ಹೇಳುವಂತೆ, ಕಾರಂತ ಆಸ್ತಿಕರಲ್ಲದಿದ್ದರೂ, ನಾಸ್ತಿಕರಲ್ಲ ಎನ್ನುವುದನ್ನು ತಾರ್ಕಿಕ ಸಮಯದಲ್ಲಿ ವಿಶ್ಲೇಷಿಸುತ್ತಾರೆ. ಅಮೇರಿಕದ ಕಪ್ಪು ಜನರ ಹೋರಾಟಕ್ಕೂ ’ಚೋಮನ ದುಡಿ’ ಗೂ ಸಂಬಂಧ ಕಾಣುವ ನಳಿನಿ ಮೈಯ್ಯ, ತಾಂತ್ರಿಕ ಪದಗಳ ಬ್ರಹ್ಮನೆಂದು ಕಾರಂತರನ್ನು ಜಯಸ್ವಾಮಿ ಅವರು ವಿಮರ್ಶಿಸುತ್ತಾರೆ. ಕಾರಂತರು ಸೃಷ್ಟಿಸುವ ಅತ್ಯಂತ ಪ್ರಾದೇಶಿಕ ಸನ್ನಿವೇಶಗಳಲ್ಲಿ ಸಾರ್ವತ್ರಿಕ ಸತ್ಯವನ್ನು ಕಾಣುವ, ಕಾರಂತರ ಕೃತಿಯನ್ನು ಚಿತ್ರೀಕರಿಸುವ ಹಂಬಲ ಪಡೆದಿದ್ದ ತಾವರೆಕೆರೆ ಶ್ರೀಕಂಠಯ್ಯ ’ಕಂಠಿ’, ಹಳ್ಳಿಯ ತಮ್ಮ ವೈದ್ಯಕೀಯ ಅನುಭವದಲ್ಲಿ ’ಔದಾರ್ಯದ ಉರುಳಲ್ಲಿ’ ಕೃತಿಯನ್ನು ಮೆಚ್ಚಿಕೊಳ್ಳುವ ರೋಹಿಣಿ ಉಡುಪ; ’ಅಂಟಿದ ಅಪರಂಜಿ’ ಯನ್ನು ಓದಬೇಕು ಎನ್ನಿಸುವಂತೆ ಗ್ರಹಿಸಿರುವ ಎಚ್. ಕೆ. ಚಂದ್ರಶೇಖರ್; ಹೀಗೆ ಪ್ರತಿಯೊಬ್ಬರೂ, ಅಚ್ಚುಕಟ್ಟಾಗಿ ಬರೆಯುವ ಹೇಮಾ ಶ್ರೀಕಂಠ, ಕುಂಭಾಶಿ ಶ್ರೀನಿವಾಸ ಭಟ್ಟ, ಅಣ್ಣಾಪುರ ಶಿವಕುಮಾರ್, ಚಂದ್ರಶೇಖರ ಐತಾಳ, ರಾಧಾಮಣಿ ಶಾಸ್ತ್ರೀ, ವಸುಧಾ ಕೃಷ್ಣಮೂರ್ತಿ, ವಿಶ್ವನಾಥ್ ಹುಲಿಕಲ್, ಆಪ್ತ ನೆನಪುಗಳನ್ನು ಪ್ರೀತಿಯಿಂದ ಮೂಡಿಸುವ ಕಾರಂತರ ಮೊಮ್ಮಕ್ಕಳು, ಎಲ್ಲರೂ -ತಮ್ಮ ತಮ್ಮ ಅನುಭವದ ಸತ್ಯದಲ್ಲಿ ಕಾರಂತರನ್ನು ಪಡೆದು, ಸೋಗಿಲ್ಲದ ಗದ್ಯದಲ್ಲಿ ತಮಗೆ ತಾವು ಕಂಡದ್ದನ್ನು ಇಲ್ಲಿ ಕಾಣಿಸುತ್ತಾರೆ.
ಈ ಪುಸ್ತಕದ ಸಂಪಾದಕ ನಾಗ ಐತಾಳರು ’ಆಹಿತಾನಲ’ ಎಂಬ ಕಾವ್ಯನಾಮದಲ್ಲಿ ’ ಅಳಿದ ಮೇಲೆ’ ಕೃತಿಯನ್ನು ಸಾಹಿತ್ಯ ವಿಮರ್ಶೆಯ ಶಿಸ್ತಿನಲ್ಲಿ ವಿಮರ್ಶಿಸಿದ್ದಾರೆ. ಕಾದಂಬರಿಯ ಪಾರ್ವತಮ್ಮ ಎಂಬ ಪಾತ್ರದ ’ ದೇವರು ಕರೆಸಿಕೊಳ್ಳುವುದು’ ಎಂಬ ಮಾತನ್ನು ಐತಾಳರು ವಿಶ್ಲೇಷಿಸುವ ಕ್ರಮ ಸಾಹಿತ್ಯ ವಿಮರ್ಶೆಯದ್ದೇ ಆಗಿದೆ. ಕಾರಂತ ಚಿಂತನ; ಕಡಲಾಚೆಯ ಕನ್ನಡಿಗರಿಂದ ಕೃತಿಯು ಎರಡು ಭಾಗಗಳನ್ನು ಹೊಂದಿದ್ದು, ಭಾಗ- 1 ರಲ್ಲಿ ಕಾರಂತ: ವ್ಯಕ್ತಿ ಮತ್ತು ಸಾಹಿತ್ಯಗಳ ವಿಮರ್ಶೆಗಳು ಹೀಗಿವೆ; ಓ ಕಾರ್ಯವಂತ, ಶಿವರಾಮ ಕಾರಂತ (ಕವನ, ಮಂಗಳೂರು ಜೈರಾಮ್ ಸುಬ್ಬರಾವ್), ಕನ್ನಡ ಹಿರಿಮೆ ಹೆಚ್ಚಿಸಿದ ಕಾರಂತರು (ಪ್ರಕಾಶ್ ಹೇಮಾವತಿ), ಕಾರಂತ ದರ್ಶನ; ನಾನು ಕಂಡ ಹಂತಗಳು( ಚಂದ್ರಶೇಖರ ಐತಾಳ), ಸರಿ ತಪ್ಪುಗಳ ಪ್ರಶ್ನೆ: ಕಾರಂತರ ಕಾದಂಬರಿಯಲ್ಲಿ ಕಂಡುಬಂದಂತೆ( ನಳಿನಿ ಮೈಯ್ಯ), ಕಾರಂತರ ಕಣ್ಣಲ್ಲಿ ಇತರರು(ಎಚ್. ವೈ. ರಾಜಗೋಪಾಲ್), ಬಾಲ ಪ್ರಪಂಚ(ಎಚ್.ಎಸ್. ಜಯಸ್ವಾಮಿ), ಸೀಳ್ಗವನಗಳು: ಕಾರಂತರ ಒಂದು ಅಪೂರ್ವ ಕವನ ಸಂಕಲನ(ಎಸ್.ಕೆ ಹರಿಹರೇಶ್ವರ), ಇಂಗ್ಲೀಷ್ ಭಾಷೆಗೆ ಕನ್ನಡ ಸಾಹಿತ್ಯದ ಭಾಷಾಂತರ ಅಗತ್ಯ( ನಾರಾಯಣ ಹೆಗ್ಡೆ), ಭಗವಂತ- ಕಾರಂತ ಸಂದರ್ಶನ( ವಸುಧಾ ಕೃಷ್ಣಮೂರ್ತಿ), ಮೊಮ್ಮಕ್ಕಳ ಕಣ್ಣಲ್ಲಿ ಕಾರಂತಜ್ಜ: ನನ್ನ ಅಜ್ಜ(ಬಿ. ವಿಜಯಲಕ್ಷ್ಮೀ ಕೃಷ್ಣಮೂರ್ತಿ), ನನ್ನ ಅಜ್ಜನ ವಿಶಿಷ್ಟತೆ(ಜಿ. ಮಾಲಾ ಉಲ್ಲಾಸ್), ಅಜ್ಜನ ನೆನಪುಗಳು(ವೃಂದ ಕೇಶವ ಐತಾಳ)
ಭಾಗ-2 ರಲ್ಲಿ ಕೃತಿ ಸಮೀಕ್ಷೆಗಳು ಹೀಗಿವೆ; ದೇವ ದೂತರು: ಒಂದು ವಿಡಂಬನ ಲೇಖನ( ಹೇಮಾ ಶ್ರೀಕಂಠ), ಚೋಮನದುಡಿ: ಬದುಕಿನ ದುಡಿತ ಎದೆಯ ಮಿಡಿತ, ದುಡಿಯ ಬಡಿತ( ಟಿ. ಶ್ರೀಕಂಠಯ್ಯ ’ ಕಂಠಿ’), ಮರಳಿ ಮಣ್ಣಿಗೆ: ಒಂದು ಪಕ್ಷಿ ನೋಟ(ಆಹಿತಾನಲ), ಮರಳಿ ಮಣ್ಣಿಗೆ : ಹೆಣ್ಣಾಗಿ ಲೇಖನಿ ಹಿಡಿದ ಗಂಢುಗಲಿ(ನಳಿನಿ ಮೈಯ),ಔದರ್ಯದ ಉರುಳಲ್ಲಿ: ಉದಾರತೆಯ ಔಚಿತ್ಯ(ರೋಹಿನಿ ಉಡುಪ), ಕುಡಿಯರ ಕೂಸು; ಒಂದು ವಿಮರ್ಶಾತ್ಮಕ ಪರಿಚಯ( ವೈ. ಆರ್. ಮೋಹನ್), ಅಳಿದ ಮೇಲೆ: ಅರಳಿ, ಫಲಿಸಿ ಸ್ಮರಣೆ ಉಳಿಸಿದ ’ಮಾತೃಪ್ರೇಮ’(ಆಹಿತಾನಲ), ಒಂಟಿ ದನಿ: ಒಂದು ವಿಚಾರ ಪ್ರಧಾನ ಕಾದಂಬರಿ(ವಿಶ್ವನಾಥ್ ಹುಲಿಕಲ್), ಇನ್ನೊಂದೇ ದಾರಿ: ಹೊಸ ಪ್ರಜ್ಞೆಯ ಪ್ರಭಾವ(ಜಿ. ಅರವಿಂದ ಉಪಾಧ್ಯ), ಮೂಕಜ್ಜಿಯ ಕನಸುಗಳು: ಮುದುಕಿಯ ಒಳಗಣ್ಣಿನ ದೃಷ್ಟಿ( ಅಣ್ಣಾಪುರ್ ಜಿ. ಶಿವಕುಮಾರ್), ಮೈಮನಗಳ ಸುಳಿಯಲ್ಲಿ: ಒಂದು ವಿಮರ್ಶಾತ್ಮಕ ಲೇಖನ(ಎಚ್. ವಿ. ರಂಗಾಚಾರ್), ಕೇವಲ ಮನುಷ್ಯರು: ಸಾಮಾನ್ಯ ಮಾನವರ ಚಿರಂತನ ಸಮಸ್ಯೆಗಳು( ಟಿ.ಎನ್. ಕೃಷ್ಣರಾಜು), ಧರ್ಮರಾಯನ ಸಂಸಾರ: ’ಧರ್ಮ’ ಕೊಟ್ಟ ಸಂತಾಪ (ರಾಧಾಮಣಿ ಶಾಸ್ತ್ರೀ), ಕಣ್ಣಿದ್ದೂ ಕಾಣರು: ಕಣ್ತೆರೆವ ವಿಚಾರ ವಿಮರ್ಶೆ (ಕೆ. ಶ್ರೀನಿವಾಸ ಭಟ್ಟ), ಅಂಟಿದ ಅಪರಂಜಿ(ಎಚ್. ಕೆ. ಚಂದ್ರಶೇಖರ್) ಇವರ ಬರಹಗಳು ಒಳಗೊಂಡಿವೆ.
©2024 Book Brahma Private Limited.