ಲೇಖಕಿ ವಿಜಯಶ್ರೀ ಸಬರದ ಅವರ ಪ್ರಧಾನ ಸಂಪಾದಕತ್ವ ಹಾಗೂ ಎಸ್ ವಿ ಪ್ರಭಾವತಿ ಅವರ ಸಂಪುಟದ ಸಂಪಾದಕತ್ವದಲ್ಲಿ ಮೂಡಿಬಂದ ಕೃತಿ ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಸಂಪುಟ -1 ಕಾವ್ಯ . ಲೇಖಕಿ ಎಸ್ ವಿ ಪ್ರಭಾವತಿ ಅವರು ಹೇಳುವಂತೆ, ಅದು 2008 ರ ಹಿಂದೆ ಮುಂದೆ ಇರಬಹುದು. ಬಿಜಾಪುರ ದ ಮಹಿಳಾ ವಿ ವಿ ದ ನಿರ್ದೇಶಕರಿಂದ ಒಂದು ಪತ್ರ ಬಂದಿತು . ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಬಂದ ಸಂದರ್ಭದ ಅನುದಾನವನ್ನು ಬಳಸಿಕೊಂಡು ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ 10 ಸಂಪುಟಗಳನ್ನು ರಚಿಸುವ ಸಂಬಂಧ ವಾಗಿ ಸಭೆಯಲ್ಲಿ ಹಾಜರಾಗಲು ಕೋರಿ. ಇಲ್ಲಿಂದ ಹೊರಟು ಗುಲಬರ್ಗಾ ತಲುಪುವ ವರೆಗೂ ಆಧುನಿಕ ಮಹಿಳಾ ಸಾಹಿತ್ಯ ದ ಹಲವು ಮಜಲುಗಳದೇ ಧ್ಯಾನ. ಸಭೆ ಪ್ರಾರಂಭವಾದ ಕೊಂಚ ಹೊತ್ತಿಗೇ ತಿಳಿಯಿತು. ಮೊದಲ ಸಂಪುಟ ಕಾವ್ಯ ಸಂಪುಟ ಅದರ ಸಂಪಾದಕಿ ನಾನು ಎಂದು. ಒಂದಾನೊಂದು ಕಾಲದಲ್ಲಿ ರಂ ಶ್ರೀ ಮುಗಳಿಯವರ ಸಾಹಿತ್ಯ ಚರಿತ್ರೆಯನ್ನು ಓದಿದ್ದ ನಾನು ಈಗ ಒಂದು ಸಂಪುಟ ವನ್ನು ನಾನೇ ಬರೆಯುವುದೇ ಎಂದು ಸಡಗರಿಸಿದೆ. ಆಗಲೇ ಮನಸ್ಸಿನಲ್ಲಿ ವಾಕ್ಯಗಳು ಮೂಡಿ ಕುಣಿಯತೊಡಗಿದವು. ತಿರುಮಲಾಂಬ ಅವರ ಭಾವಗೀತಾವಳಿ ಭಕ್ತಿ ಗೀತಾವಳಿ ಭದ್ರಗೀತಾವಳಿ ಗಳಿಂದ ಹಿಡಿದು ಸವಿತಾ ನಾಗಭೂಷಣ ಅವರ ತಂಗಿ ಹುಟ್ಟಿದಳು ವರೆಗೆ ಸುಮಾರು ಒಂದು ನೂರು ವರ್ಷಗಳ ಮಹಿಳಾ ಕಾವ್ಯ ಮನಸ್ಸಿನಲ್ಲಿ ಹರಳುಗಟ್ಟತೊಡಗಿತು . ಭಯ ಸಂಭ್ರಮಗಳ ರಾಗ ತಾಡನಗಳಿಂದ ಹೃದಯ ಹೂ ಬಿಟ್ಟಿತು. ಈ ವೇಳೆಗೆ ಸಂಪನ್ಮೂಲ ವ್ಯಕ್ತಿ ಗಳಾಗಿ ಬಂದಿದ್ದ ಹಲವರು ಮಾತನಾಡಿದ್ದರು. ಕೊನೆಯದಾಗಿ ಬಸವರಾಜ ಸಬರದ ಅವರು ಮಾತನಾಡಿದಾಗ ತಿಳಿಯಿತು ಇದು ನಾನೊಬ್ಬಳೇ ಬರೆಯುವಂಥದಲ್ಲ. ಇತರರ ಕೈಲಿ ಬರೆಸಬೇಕಾದ ಪ್ರಬಂಧಗಳ ಸಂಕಲನ ಎಂದು. ಗುಲಬರ್ಗಾದಿಂದ ಹಿಂದಿರುಗಿ ಬಂದವಳೇ ಒಂದು ಸುಂದರ ಪತ್ರ ತಯಾರಿಸಿ ಎಲ್ಲರಿಗೂ ಕಳಿಸಿದಾಗ ತಿಳಿಯಿತು. ಇದು ಅಷ್ಟು ಸುಲಭದ ಕೆಲಸವಲ್ಲ ಎಂದು ಕೆಲವರು ನಿಮ್ಮ ಪತ್ರ ಸುಂದರವಾಗಿದೆ ಆದರೆ ಬರೆಯಲಾರೆ ಎಂದರು. ಕೆಲವರು ಬರೆಯುವೆನೆಂದು ಹೇಳಿ ಬರೆಯಲಿಲ್ಲ. ಹೀಗೇ .. ಏನೇನೋ ನಾನು ಊಹೆ ಕೂಡಾ ಮಾಡಲಾಗದ ತೊಡಕುಗಳು. ನವೋದಯ ನವ್ಯ ದಲಿತ ಬಂಡಾಯ ಎಂಬುದನ್ನು ನಾವು ಅರಿವು ಅಸ್ಮಿತೆ ಪ್ರತಿಭಟನೆ ಎಂದು ಮಾರ್ಪಡಿಸಿಕೊಂಡಿದ್ದೆವು. 2008 ರಿಂದ 2012 ರವರೆಗಿನ ಈ ರಸಯಾತ್ರೆಯು ಆಯಾಸಯಾತ್ರೆಯಾಗಿ ಮುಗಿದು ಈ ಪುಸ್ತಕ ಹೊರಬಂದಿತು ಎಂಬುದಾಗಿ ಕೃತಿ ಮೂಡಿ ಬಂದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
©2024 Book Brahma Private Limited.