‘ರಂ. ಶ್ರೀ ಮುಗಳಿ ಚಿತ್ರಿಸಿದ ಪಂಪ ರನ್ನರು’ ಕೃತಿಯು ಹಿರಿಯ ವಿದ್ವಾಂಸ ಶ್ರೀನಿವಾಸ ಹಾವನೂರ ಅವರ ಸಂಪಾದಿತ ಗ್ರಂಥವಾಗಿದೆ. ಕೃತಿಗೆ ಪ್ರವೇಶಿಕೆಯನ್ನು ಬರೆದಿರುವ ಎಸ್. ವಿ ಸುಜಾತ ಅವರು, ‘ಪಂಪನ ದೇಸಿಯಾದ ಪುಲಿಗೆಯ ತಿರುಳನ್ನಡವು ಯಾವ ಪ್ರದೇಶಕ್ಕೆ ಸೇರಿದ್ದು ಎಂದು ವಿವೇಚಿಸುವಾಗ, ಆಧಾರವಾಗಿ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಇಂದಿಗೂ ಬಳಕೆಯಲ್ಲಿರುವ ಹಾಗೂ ಮರಾಠಿ, ಪ್ರಾಕೃತ ಇತ್ಯಾದಿ ಸಮೀಪ ಭಾಷೆಗಳಲ್ಲಿ ದೊರೆಯುವ ಸಂವಾದೀ ಶಬ್ದಗಳನ್ನು ಮತ್ತು ಪ್ರಯೋಗಗಳನ್ನು ಉಲ್ಲೇಖಿಸುತ್ತಾರೆ. ಇದು ಅವರ ಸಂಶೋಧನಾ ಪ್ರಶ್ನೆಗೆ ನಿದರ್ಶನ. ಉತ್ತರ ಕರ್ನಾಟಕ ಪ್ರದೇಶದ ನಿಕಟ ಸಂಪರ್ಕವಿದ್ದ ಅವರ ಅಭಿಪ್ರಾಯಗಳಿಗೆ, ಆಧಾರಗಳಿಗೆ ಅಥೆಂಟಿಸಿಟಿ ಇದೆ ಎನ್ನುವುದನ್ನು ನೆನಪಿಡಬೇಕು ಎನ್ನುತ್ತಾರೆ
`ಪಂಪನ ದೃಷ್ಟಿಯಲ್ಲಿ ಭರತ - ಬಾಹುಬಲಿ' ಎಂಬ ಒಂದು ಚಿಕ್ಕ ಲೇಖನದಲ್ಲಿ ಬಾಹುಬಲಿಗೆ ಸೋತು ತಲೆತಗ್ಗಿಸಿ ನಿಂತ ಚಕ್ರವರ್ತಿ ಭರತನು ತನ್ನ ಕಂಬನಿಯ ಮೂಲಕ ಬಾಹುಬಲಿಯ ಪಾದ ಪೂಜೆ ಮಾಡುತ್ತಿರುವಂತೆ, ಬಾಹುಬಲಿಯು ತನ್ನ ಕಣ್ಣೀರಿನಿಂದ ಭರತನಿಗೆ ರಾಜ್ಯಾಭಿಷೇಕ ಮಾಡುತ್ತಿರುವನೋ ಎಂಬಂತೆ ತೋರಿತು ಎನ್ನುವ ಸನ್ನಿವೇಶದ ಗರ್ಭಿತಾರ್ಥವನ್ನು ಹೀಗೆ ವಿವೇಚಿಸಿದ್ದಾರೆ. `ಶಕ್ತಿಯಿಂದ ಕೂಡಿದ ಸಾತ್ವಿಕತೆ ಮನುಷ್ಯನ ಜೀವನವನ್ನು ತೇಜಸ್ವಿಯನ್ನಾಗಿಸುತ್ತದೆ. ನಿಜವಾದ ಗೆಲವನ್ನು ತರುತ್ತದೆ. ಕೇವಲ ಸಾತ್ವಿಕತೆ ದುರ್ಬಲತೆಗೆ ದಾರಿಮಾಡಿಕೊಡುವುದು, ಕೇವಲ ಶಕ್ತಿ ಪಾಶವೀ ಬಲಕ್ಕೆ ಕಣ್ಸನ್ನೆ ಮಾಡುವುದು, ಸಾತ್ವಿಕತೆ ಮತ್ತು ಶಕ್ತಿಗಳ ನಡುವಿನ ಸಮತೂಕವನ್ನು ಸಾಧಿಸುವುದೇ ಉತ್ತಮ ಸಂಸ್ಕೃತಿ, ಪಂಪನು ಚಿತ್ರಿಸಿದ ಭರತ - ಬಾಹುಬಲಿಯರ ಸಂದರ್ಭವು ಈ ಬಗೆಯಲ್ಲಿ ಆಧುನಿಕ ಜಗತ್ತಿಗೆ, ಅದೇಕೆ ಯಾವುದೇ ಕಾಲದ ಜನಕ್ಕೆ ಅಮರ ಸಂದೇಶವನ್ನು ನೀಡಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಪಾತ್ರ ಸೃಷ್ಟಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಭೀಮಸೇನನೇ ಹೇಗೆ ಮತ್ತು ಏಕೆ ಕಾವ್ಯದ ನಾಯಕನೆ೦ಬುದನ್ನು ನಿರೂಪಿಸಿದ್ದಾರೆ. ಗದಾಯುದ್ಧ ಹಾಗೂ ಇತರ ಕಾವ್ಯಗಳಲ್ಲಿ ಚಿತ್ರಿತನಾಗಿರುವ ದುರ್‍ಯೋಧನನ ವ್ಯಕ್ತಿತ್ವದ ಸಂಕೀರ್ಣತೆಯನ್ನು ಸರಳವಾಗಿ ಬಿಡಿಸಿ ತೋರಿಸಿದ್ದಾರೆ. ಪಾತ್ರಗಳ ವ್ಯಕ್ತಿತ್ವದ ವಿವಿಧ ಮುಖಗಳು ಹಾಗೂ ಸನ್ನಿವೇಶ ಚಿತ್ರಣಗಳ ಕಾಲ್ಪನಿಕ ಅಧ್ಯಯನಗಳ ರೀತಿ ಸಂಶೋಧಕರಿಗೆ ವಿಮರ್ಶಕರಿಗೆ ಮಾದರಿಯಾಗಿದೆ ಎಂದಿದ್ದಾರೆ.
©2024 Book Brahma Private Limited.