‘ಶರಣ ಮೋನಪ್ಪಯ್ಯನ ಚಾರಿತ್ರ್ಯ’ ಲೇಖಕ ಡಾ.ಎಫ್.ಟಿ. ಹಳ್ಳಿಕೇರಿ ಸಂಪಾದಿಸಿರುವ ಮಹತ್ವದ ಕೃತಿ. ಇದು ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರ ಶರಣರ ಚರಿತ್ರೆ. ತಮ್ಮ ಮಹಿಮೆಯಿಂದಲೇ ಎಲ್ಲರನ್ನೂ ಆಕರ್ಷಿಸಿದ್ದ ಮೋನೇಶ್ವರರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಹಾಪುರ ಮುಂತಾದೆಡೆ ತಿರುಗಾಡಿ, ಮಹಿಮೆಗಳನ್ನು ಮೆರೆದವರೆಂಬುದು ಈಗ ಇತಿಹಾಸ.
ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರಷ್ಟೆ. ಅವರು ಇತ್ತ ವಿಶ್ವಕರ್ಮರಾಗಿಯೂ ಅತ್ತ ವೀರಶೈವ ಪರಂಪರೆಯವರಾಗಿಯೂ ಇದ್ದವರು. ಅವರಿದ್ದ ಕಾಲದಲ್ಲಿ ಯುದ್ಧದ ಕಾರ್ಮೋಡ ಸದಾ ಇದ್ದೇಇತ್ತು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಓಂ ಮತ್ತು ಅಲ್ಲಾ ಒಂದೇ ಎಂಬ ಅಧ್ಯಯನ ಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾ ಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯನ ಚರಿತ್ರೆಯೇ ಈ ಕೃತಿ.
©2024 Book Brahma Private Limited.