ಶ್ರೀ ಚೈತನ್ಯ ಸಂಭ್ರಮ-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಶ್ರೀ ಚೈತನ್ಯರ ಕುರಿತು ವಿವಿಧ ಲೇಖಕರ ಬರಹಗಳನ್ನು ಸಂಪಾದಿಸಿದ ಕೃತಿ ಇದು. ಶ್ರೀ ವಿಶ್ವೇಶತೀರ್ಥರು ಶ್ರೀಪಾದಂಗಳೂ, ಮಧುಪಂಡಿತ ದಾಸ, ವ್ಯಾಸನಕೆರೆ ಪ್ರಭಂಜನಾಚಾರ್ಯ, ಆರ್. ವೆಂಕಟರಾವ್ ಹಾಗೂ ಭಾಗ=2 ರಲ್ಲಿ ಪ್ರಸಂಗಾವಧಾನಗಳನ್ನು ಸಂಪಾದಿಸಿದ್ದಾರೆ. ಜಗಾಯ್ ಮತ್ತು ಮಧಾಯ್ ಪ್ರಸಂಗ, ಕೇಶವ ಕಾಶ್ಮೀರಿ ಪ್ರಸಂಗ, ಪ್ರತಾಪರುದ್ರ ಪ್ರಸಂಗ, ಶ್ರೀಚೈತನ್ಯರ ಬಾಲ್ಯಕಾಂಡ, ಛಾಂದಖಾಜಿ ಪ್ರಸಂಗ, ಪ್ರಕಾಶಾನಂದ ಸರಸ್ವತಿ ಪ್ರಸಂಗಗಳ ಕುರಿತು ಪ್ರಸ್ತಾಪಿಸಿ ಬರೆದ ಬರಹಗಳನ್ನು ಒಳಗೊಂಡಿವೆ.
ಬಂಗಾಳದ ನವದ್ವೀಪದಿಂದ ಓಡಿಸ್ಸಾದ ಪುರಿಯಲ್ಲಿ ನೆಲೆನಿಂತ ಶ್ರೀ ಚೈತನ್ಯ (1486-1534) ಮಹಾಪ್ರಭುಗಳು ಸಂಗೀತ, ಕಲೆ, ಸಾಹಿತ್ಯ, ಧಾರ್ಮಿಕ ಹೀಗೆ ವಿವಿಧ ವಲಯಗಳ ಮೇಲೆ ತಮ್ಮದೇ ಆದ ಶ್ರೀ ಕೃಷ್ಣಪ್ರಜ್ಞೆಯ ಪ್ರಭಾವ ಬೀರಿದವರು. ಬ್ರಹ್ಮ ಸಮಾಜ, ರಾಮಕೃಷ್ಣ ಮಿಷನ್ ಮುಂತಾದ ಸಂಸ್ಥೆಗಳ ಮೇಲೂ ಶ್ರೀ ಚೈತನ್ಯರ ಪ್ರಭಾವವಿದೆ. ಭಾರತ ಕಂಡ ಮಹಾವೇದಾಂತಿಗಳ ಪೈಕಿ ಶ್ರೀ ಚೈತನ್ಯರು ಪ್ರಮುಖರು. ತಮ್ಮ ಭಕ್ತ ಸಮೂದಾಯಕ್ಕೆ `ಹರೇ ಕೃಷ್ಣ ಹರೇ ರಾಮ' ಎಂಬ ಮಂತ್ರವನ್ನು ನೀಡಿದವರು ಶ್ರೀ ಚೈತನ್ಯರೇ! `ದೇಹವು ಮಣ್ಣು ಹಾಗೂ ನಾವು ಉಣುವ ವಸ್ತುವೂ ಮಣ್ಣು' ಎಂಬ ವೈರಾಗ್ಯದ ಸೂತ್ರವನ್ನು ಜನತೆಗೆ ಬೋಧಿಸಿದರು. ಜಾತಿ, ಮತ ಬೇಧಗಳನ್ನು ತೊರೆದರೆ ಭಗವಂತನ ಅನುಗ್ರಹ ಸಾಧ್ಯ ಎಂಬುದನ್ನು ಜಾತ್ಯತೀತವಾಗಿ ಸಾರಿದವರು. ಈ ಮಹಾನ್ ಚೇತನರ ದಿವ್ಯ ಬದುಕು-ಸಂದೇಶಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.