ಹೆಸರೇ ಹೇಳುವಂತೆ ಕರ್ನಾಟಕದ ಲೇಖಕಿಯರ ಸಂಖ್ಯಾ ಸೂಚಕ ಪರಿಚಯದ ಮಾಲೆಯೇ "ನಮ್ಮ ಲೇಖಕಿಯರು" ಎಂಬ ಈ ಪುಸ್ತಕ.1982ರಲ್ಲಿ ನವೆಂಬರ್ 20-21ರಂದು ಗುಲ್ಬರ್ಗಾ ದಲ್ಲಿ ನಡೆದ ಅಖಿಲ ಕರ್ನಾಟಕ ಲೇಖಕಿಯರ ಎರಡನೇಯ ಸಮ್ಮೇಳನದಲ್ಲಿ ಈ ಪುಸ್ತಕ ಅನಾವರಣಗೊಂಡಿತು. ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಲೇಖಕಿಯರಿಗೆ ಪರಸ್ಪರ ಪರಿಚಯದ ಗೊಂದಲ ಉಂಟಾಗಿತ್ತು.ಕಾರಣ ಪರಸ್ಪರ ಪರಿಚಯಕ್ಕೆ ಅಪರೂಪದ ದೂರವಾಣಿಯ ಸಂಪರ್ಕ, ಪತ್ರಗಳ ವಿನಿಮಯ,ಪತ್ರಿಕೆಗಳ ಸುದ್ಧಿ ಬಿಟ್ಟರೆ ಬೇರೆ ಯಾವ ಮಾಧ್ಯಮಗಳ ಲಭ್ಯವಿರಲಿಲ್ಲಾ.ಸ್ನೇಹ ಹಸ್ತ ಚಾಚಲು ಮುಖ್ಯವಾಗಿ ಇಂದಿನ ಮೊಬೈಲುಗಳಿರಲಿಲ್ಲಾ. ಅಂಚೆ ಕಚೇರಿಯ ವ್ಯವಹಾರ ಸಹ ಮಂದಗತಿ.ಹೀಗಿರುವಾಗ ಲೇಖಕಿಯರು ಪರಸ್ಪರ ಪರಿಚಿತರಾಗುವುದಾದರೂ ಹೇಗೆ?ಇಂತಹ ಒಂದು ಗೊಂದಲದ ಸನ್ನಿವೇಶವನ್ನು ಮೊದಲ ಸಮ್ಮೇಳನದಲ್ಲಿ ಕಂಡ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ.ಹಂಪ ನಾಗರಾಜಯ್ಯನವರು ಕರ್ನಾಟಕದ ಲೇಖಕಿಯರನ್ನು ಪ್ರಪಂಚಕ್ಕೆ ಪರಿಚಯಿಸಲು ಮುಂದಾದರು.ಅದರ ಯೋಜನೆಯ ಕೂಸೇ "ನಮ್ಮ ಲೇಖಕಿಯರು" ಎಂಬ ಪುಸ್ತಕ.ಎಲ್ಲೆಲ್ಲೋ ಅಡಗಿ ಕುಳಿತಿದ್ದ ಲೇಖಕಿಯರ ಗುಂಪನ್ನು ಆಧುನಿಕ ಮಾಧ್ಯಮಗಳ ಸಹಾಯವಿಲ್ಲದೆ ಹುಡುಕಿ ಒಂದೆಡೆ ಕಲೆಹಾಕುವುದು ಸುಲಭದ ಮಾತಾಗಿರಲಿಲ್ಲ.ಕೇವಲ ಒಂದು ವರ್ಷದಲ್ಲಿ ಸಂಗ್ರಹಿಸಿದ್ದ ಬರಹಗಾರರ ಸಂಖ್ಯೆ ಇಷ್ಟೇ ಎಂದು ನಿರ್ಧರಿಸುವ ಹಾಗಿರಲಿಲ್ಲ.ಆದರೂ ಪ್ರಯತ್ನಕ್ಕೆ ಅಡ್ಡಿ ಇಲ್ಲ ಎಂಬಂತೆ ಶ್ರೀ.ಹಂಪನಾ ಅವರ ಸಾರಥ್ಯದಲ್ಲಿ ಶ್ರೀಮತಿ.ಹೇಮಲತಾ ಮಹಿಷಿ, ಶ್ರೀಮತಿ.ಹೆಚ್.ಎಸ್.ಪಾರ್ವತಿ ಅವರ ಮಾರ್ಗದರ್ಶನದಲ್ಲಿ,ಪರಿಷತ್ ಸಿಬ್ಬಂಧೀ ವರ್ಗದ ಸಹಕಾರದಲ್ಲಿ ಲೇಖಕಿಯರ ಹುಡುಕಾಟ ಪ್ರಾರಂಭವಾಯಿತು. ಸಂಗ್ರಹಿಸಿದ ಲೇಖಕಿಯರ ಮಾಹಿತಿಗಳಿಗೆ ರೂಪಗೊಟ್ಟು ಪುಸ್ತಕವಾಗಿ ಹೊರ ತರುವ ಭಾರದ ನೊಗವನ್ನು ಜೋಡೆತ್ತಿನಂತೆ ಹೊತ್ತವರು ಇಬ್ಬರು.ಅವರೇ ನಮ್ಮ ನೆಚ್ಚಿನ ಬರಹಗಾರರಾದ ಶ್ರೀಮತಿ.ವೈ.ಕೆ.ಸಂಧ್ಯಾ ಶರ್ಮ ಹಾಗು ಶ್ರೀಮತಿ.ಕುಲಶೇಕರಿ.ಸಂಪಾದಕಿಯರಾಗಿ ಸಮರ್ಪಕವಾಗಿ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸಿದರು.ಇವರೆಲ್ಲರ ಶ್ರಮದ ಫಲವೇ "ನಮ್ಮ ಲೇಖಕಿಯರು"ಎಂಬ ಪುಸ್ತಕದ ಅವತರಣೆ.ಮುನ್ನುಡಿ ಬರೆದವರು ಶ್ರೀ.ಹಂಪ ನಾಗರಾಜಯ್ಯ ಅವರು. ಈ ಪುಸ್ತಕದಲ್ಲಿ 224 ಲೇಖಕಿಯರ ಪರಿಚಯವಿದೆ.ಅವರ ಛಾಯಾಚಿತ್ರಗಳೊಂದಿಗೆ ವಿಳಾಸಗಳೂ ಇವೆ.ಆದರೆ ಈ ವಿಳಾಸಗಳಲ್ಲಿ ಅದೆಷ್ಟು ಮಂದಿ ಲಭ್ಯರು ತಿಳಿಯದು.ಇದರಲ್ಲಿ ಅನೇಕರು ಜೀವಂತವಾಗಿಲ್ಲ.ಆದರೆ ಅವರ ಕೃತಿಗಳು ನಮ್ಮೊಂದಿಗೆ ಉಸಿರಾಡುತ್ತಿವೆ. ಮತ್ತೆ ಕೆಲವರು ತೆರೆಮರೆ ಸರಿದು ಅವರ ಕೃತಿಗಳೂ ಲಭ್ಯವಿಲ್ಲ ಎಂಬುದೇ ವಿಪರ್ಯಾಸ.ಆದರೂ ಇವರೆಲ್ಲರೂ ನಮ್ಮ ಸಾಹಿತ್ಯ ಕ್ಷೇತ್ರದ ಆಧಾರ ಸ್ಥಂಭಗಳಂತೆ.ಈಗ ಇವರ ಸಂತತಿಯೂ ಕನ್ನಡ ಸಾಹಿತ್ಯ ಕ್ಷೆತ್ರದಲ್ಲಿ ಅಪಾರವಾಗಿ ಬೆಳೆದಿದೆ.ಸಂಖ್ಯೆ ಮಾತ್ರವಲ್ಲ ಗುಣಮಟ್ಟದ ಲೇಖನವೂ ಬೆಳೆದಿದೆ ಎಂಬುದು ಹೆಮ್ಮೆಯ ವಿಚಾರ.
©2024 Book Brahma Private Limited.