ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟ ಮಾಲಿಕೆಯಡಿ ಪ್ರಕಟಿತ ಕೃತಿ-ಕಾವ್ಯ. ಡಾ. ಪಿ. ಚಂದ್ರಿಕಾ ಸಂಪಾದಕರು. ಡಾ. ಮಲ್ಲಿಕಾ ಘಂಟಿ ಮಾಲಿಕೆಯ ಸಂಪಾದಕರು. ಸಂಪಾದಕರು ಹೇಳುವಂತೆ ‘ಈ ಕೃತಿಯು ಕೊಲಾಜ್ ಮಾದರಿಯ ಸಂಕಲನ. ಶಾಸನಗಳಲ್ಲಿ ಮಹಿಳಾ ಅಭಿವ್ಯಕ್ತಿಯಿಂದ ಹಿಡಿದು ಇವತ್ತಿನವರೆಗೂ ಮಹಿಳಾ ಕಾವ್ಯ ಹರಿದು ಬಂದ ದಾರಿಗಳ ಕಿರು ಪರಿಚಯ ಆಗುವಂತೆ ಕವಿತೆಗಳನ್ನಿಲ್ಲಿ ಕೊಡಲಾಗಿದೆ. ಸಣ್ಣ ಕವಿತೆಯಿಂದ ಹಿಡಿದು ಮಹಾಕಾವ್ಯದ ಝಲಕನ್ನು ಹೇಳುವ ದೀರ್ಘ ಕಾವ್ಯ ಭಾಗವನ್ನು ಆರಿಸಿಕೊಡಲಾಗಿದೆ. ಜಾನಪದದಿಂದ ಅಭಿಜಾತ ಕಾವ್ಯದವರೆಗೂ ಹರಿಡಿಕೊಂಡಿದೆ ಎಂದು ಕೃತಿಯ ಕುರಿತು ಅಭಿಪ್ರಾಯಪಟ್ಟಿದ್ದಾರೆ.
ಈ ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಿದ್ದು, ಎರಡನೇ ಭಾಗವು ಸುದೀರ್ಘವಾಗಿದೆ. ನಂಜನಗೂಡು ತಿರುಮಲಾಂಬಾ, ತಿರುಮಲೆ ರಾಜಮ್ಮ, ಜಯದೇವಿತಾಯಿ ಲಿಗಾಡೆ, ಬೆಳೆಗೆರೆ ಜಾನಕಮ್ಮ, ಎಲ್.ವಿ. ಕಾವೇರಮ್ಮ ಸೇರಿದಂತೆ ಒಟ್ಟು 125 ಕವಯತ್ರಿಯರ ತಲಾ ಒಂದು ಕವಿತೆಗಳನ್ನು ಸಂಕಲಿಸಲಾಗಿದೆ. ಭಾಗ -1 ರಲ್ಲಿ, ವಚನಕಾರ್ತಿಯರು, ಸಂಚಿ ಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ದರೋಜಿ ಈರಮ್ಮ, ತಂಬೂರಿ ರಾಜಮ್ಮ, ತಿಮ್ಮಕ್ಕನ ಪದ, ಸಿರಿಯಜ್ಜಿ ಹಾಗೂ ಕೋಲಾರ ಪದ್ಮಾಬಾಯಿ ಅವರ ಕವಿತೆಗಳಿವೆ.
ಕೃತಿಯ ಕುರಿತು ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.