`ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ-1’ ಕೃತಿಯು ಎಸ್.ಪಿ ಪದ್ಮಪ್ರಸಾದ್ ಅವರ ಐತಿಹಾಸಿಕ ಸಂಶೋಧನಾ ಗ್ರಂಥವಾಗಿದೆ. ಈ ಸಂಪುಟ ಕೆಲವು ಹೊಸ ವಿಚಾರಗಳನ್ನು ಒಳಗೊಂಡಿದ್ದು, ಒಂದನೇ ನಾಗವರ್ಮನ ಮತ ವಿಚಾರ ಕುರಿತ ಚರ್ಚೆಯನ್ನು ಮತ್ತೊಂದು ಮಜಲಿಗೆ ತಂದಿರುತ್ತದೆ. ಕವಿ ಆದಿತ್ಯ, ಕರ್ಣಾಭರಣ ಸೂರಿ ಹಾಗೂ ‘ರತ್ನಕರಂಡದ ಕಥೆಗಳು’ ಗದ್ಯ ಕೃತಿಯ ಅಜ್ಞಾತ ಕರ್ತೃ ಹೀಗೆ ಸಾಹಿತ್ಯಚರಿತ್ರೆಯಲ್ಲಿ ದಾಖಲಾಗದ ಕವಿಗಳ ಬಗೆಗಿನ ಮಾಹಿತಿ, ಶ್ರೀವಿಜಯವನ್ನು ಕುರಿತು ಕೆಲವು ಹೊಸ ವಿಚಾರಗಳ ಸೇರ್ಪಡೆ- ಇವೆಲ್ಲಾ ಈ ಸಂಪುಟದ ವೈಶಿಷ್ಟ್ಯಗಳಾಗಿವೆ.
ಕೃತಿಯ ಕುರಿತು ಪ್ರಾಧ್ಯಾಪಕ ಡಿ. ವಿ. ಪರಮಶಿವಮೂರ್ತಿ ಅವರು, ಭಾಷಾ ಸ್ವರೂಪ, ಭಿನ್ನಕಾಲಘಟ್ಟ, ರಾಜವಂಶಾಧಾರಿತ, ವಿವಿಧ ಛಂದಸ್ಸುಗಳ ಪ್ರಕಾರ, ಪ್ರಧಾನ ಕವಿಗಳನ್ನಾಧರಿಸಿ, ಮೌಲ್ಯಗಳ ಆಧಾರದಲ್ಲಿ ಮತ್ತು ಧರ್ಮಗಳ ಆಧಾರದಲ್ಲಿ ಸಾಹಿತ್ಯ ಚರಿತ್ರೆಗಳು ರೂಪುಗೊಂಡಿರುವುದು ಈಗಾಗಲೇ ಚಿರಪರಿಚಿತ. ಎಸ್. ಪಿ ಪದ್ಮಪ್ರಸಾದ್ ಅವರ ಪ್ರಸ್ತುತ ಜೈನ ಸಾಹಿತ್ಯ ಚರಿತ್ರೆಯ ಸಂಪುಟವು ಈಗಿರುವ ಅನೇಕ ಸಾಹಿತ್ಯಚರಿತ್ರೆ ಕೃತಿಗಳ ನಡುವೆ ವಿಶೇಷವಾಗಿ ಕಂಡುಬರುತ್ತವೆ. ಇಲ್ಲಿನ ಎಲ್ಲಾ ಲೇಖನಗಳೂ ಜೈನಸಾಹಿತ್ಯದ ಪರಿಚಯವನ್ನಷ್ಟೇ ಮಾಡದೆ ಕಾವ್ಯಗಳ ವಿಮರ್ಶೆಯನ್ನೂ ಮಾಡಿರುತ್ತಾರೆ. ಇಲ್ಲಿನ ಹಲವು ಲೇಖನಗಳಿಗೆ ಸಂಪಾದಕರು ಬರೆದಿರುವ ಪೂರಕ ಟಿಪ್ಪಣಿಗಳೂ ಸಹ ಮೌಲಿಕವಾಗಿವೆ. ಈ ಕೃತಿಯ ಅಧ್ಯಯನದಿಂದ ಜೈನ ಕವಿ-ಕಾವ್ಯ ಪರಂಪರೆಯ ಮಹತ್ತು ಅರಿವಾಗುವುದಲ್ಲದೆ ಜೈನ ಕವಿಗಳು ಕನ್ನಡ ಭಾಷೆಯನ್ನು ಬಳಸಿದ ಮತ್ತು ಬೆಳೆಸಿದ ಪರಿ, ಅವರ ಅಗಾಧ ಪ್ರತಿಭೆ ವಿಸ್ಮಯವನ್ನುಂಟು ಮಾಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.