ಲೇಖಕ ರಮೇಶ ಎಸ್. ಕತ್ತಿ ಅವರ ಸಂಪಾದಕತ್ವದ 'ಬಯಲೆಂಬೊ ಬಯಲು ಅನುಸಂಧಾನ' ಕೃತಿಯು ಕನ್ನಡದ ಮೊದಲ ದಲಿತ ಬಯೋಪಿಕ್ ಕಾದಂಬರಿಯಾಗಿದೆ. ಕನ್ನಡದ ಅಭಿಜಾತ ಕಾದಂಬರಿಗಳಾದ ಕಾನೂನು ಹೆಗ್ಗಡತಿ, ಮರಳಿ ಮಣ್ಣಿಗೆ ಗ್ರಾಮಾಯಣ, ಸಮರಸವೇ ಜೀವನ, ಒಡಲಾಳದಂತಹ ಸಾಲಿನಲ್ಲಿ ನಿಲ್ಲುವ ಪ್ರೊ. ಪೋತೆಯವರ ಬಯಲೆಂಬೊ ಬಯಲು ಮೂರು ತಲೆಮಾರುಗಳ ದಲಿತ ಕುಟುಂಬದ ಕಥನವನ್ನು ಹೇಳುತ್ತಲೇ ಒಟ್ಟು ದಲಿತ ಸಮುದಾಯದ ಆತ್ಮ ಕಥೆಯಾಗಿಯೂ ತನ್ನ ಆವರಣವನ್ನು ವಿಸ್ತರಿಸಿಕೊಳ್ಳುತ್ತದೆ. ಇಲ್ಲಿ ಬರುವ ಮೂರು ತಲೆಮಾರಿನ ಪ್ರತಿನಿಧಿಗಳಲ್ಲಿ ಮೊದಲ ತಲೆಮಾರಿನ ರಾಮಪ್ಪ ಎರಡನೆಯ ತಲೆಮಾರಿನ ತಿಪ್ಪಣ್ಣ ಹಾಗೂ ಮೂರನೆಯ ತಲೆಮಾರಿನ ಹನುಮ ಇವರೆಲ್ಲರೂ ತುಂಬಾ ಕ್ರಿಯಾಶೀಲರಾಗಿ ಬದುಕು ಕಟ್ಟಿಕೊಳ್ಳಲು ಹೋರಾಡಿದ ಪಾತಗಳು. ಆಯಾ ಕಾಲದ ದಲಿತ ಸಮುದಾಯದ ತಲ್ಲಣ, ತವಕ ಸಂಘರ್ಷ, ಅಕ್ಷರ ಲೋಕದ ಕಡೆಗೆ ನಿಡುಗಣ್ಣ ನೀಡುವುದನ್ನು ತೋರಿಸುತ್ತವೆ. ವೈಭವೀಕರಣವಿಲ್ಲದೆ, ಯಾವ ಮುಲಾಜಿಗೂ ಒಳಗಾಗದೆ ಕಾದಂಬರಿಕಾರರು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಕಟ್ಟಿರುವ ಬಗೆಯನ್ನು ವಸ್ತುವಿಂದ ಹಿಡಿದು ಭಾಷೆ, ಶೈಲಿ, ತಂತ್ರ, ತತ್ವ ಸಿದ್ದಾಂತಗಳ ಪರಿಪರಿಯಾದ ಮುಖದಿಂದ ನಾಡಿನ ಅನೇಕ ವಿದ್ವಾಂಸರು. ವಿಮರ್ಶಕರು ‘ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ’ಯನ್ನು ಅನುಸಂಧಾನ ಮಾಡಿರುವ ಬರಹಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.
©2024 Book Brahma Private Limited.