‘ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ’ ಲೇಖಕ ಎಫ್. ಟಿ. ಹಳ್ಳಿಕೇರಿ ಅವರ ಸಂಪಾದನಾ ಕೃತಿ. ದಕ್ಷಿಣ ಭಾರತದ ಭಾಷೆ ಸಾಹಿತ್ಯ ಮತ್ತು ಶಿಲ್ಪಗಳಲ್ಲಿ ಸತ್ಯೇಂದ್ರಚೋಳನ ಕತೆ ಪ್ರಸಿದ್ಧವಾಗಿದೆ. ವಿಶೇಷವಾಗಿ ತಮಿಳು ಸಾಹಿತ್ಯದಲ್ಲಿ ಕುಡಿಯೊಡೆದ ಈ ಕತೆ ಮುಂದೆ ಕನ್ನಡ ತೆಲುಗು ಮಲೆಯಾಳ ಸಾಹಿತ್ಯದ ಅನೇಕ ಕವಿಗಳ ಕಾವ್ಯಕ್ಕೆ ವಸ್ತುವಾಗಿದೆ. ಕನ್ನಡದ ಮಧ್ಯಕಾಲೀನ ಸಾಹಿತ್ಯ ಸಂದರ್ಭದಲ್ಲಿಯಂತೂ ಈ ಕಥೆ ವೈವಿಧ್ಯಮಯವಾಗಿ ಬೆಳವಣಿಗೆಯಾಗಿದೆ, ಹರಿಹರ(ಮನುಚೋಳ ರಗಳೆ), ಗುಬ್ಬಿ ಮಲ್ಲಣಾರ್ಯ(ಭಾವಚಿಂತಾರತ್ನ), ಷಡಕ್ಷರದೇವ(ರಾಜಶೇಖರ ವಿಳಾಸ), ಧೂಪದಹಳ್ಳಿ ಶಾಂತಕವಿ(ಮಾಧವಾಂಕ ಚರಿತೆ) ಮೊದಲಾದವರು ಈ ಕತೆಯನ್ನಾಧರಿಸಿ ಕಾವ್ಯಗಳನ್ನು ರಚನೆ ಮಾಡಿದ್ದಾರೆ.
ಮನುಷ್ಯನು ನ್ಯಾಯ ನೀತಿ ಧರ್ಮ ಸತ್ಯ ಸಾಧನಗಳಿಂದ ಪಾರಮಾರ್ಥಿಕ ಬದುಕನ್ನು ಪರಿಪೂರ್ಣವಾಗಿ ಅನುಭವಿಸುತ್ತಾನೆ ಎಂಬುದನ್ನು ಮಾಧವಾಂಕ ಚರಿತೆ ಚೆನ್ನಾಗಿ ತಿಳಿಸಿಕೊಡುತ್ತದೆ. ನಡುಗನ್ನಡ ಭಾಷೆ ಮತ್ತು ದೇಶೀಯ ಸೊಗಡಿನಿಂದ ಕೂಡಿದ ಈ ಕಾವ್ಯ ಕವಿಯ ಸಮಕಾಲೀನ ಸಂದರ್ಭದ ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಅನಾವರಣಗೊಳಿಸಿರುವುದನ್ನು ಗಮನಿಸಬಹುದು. ಈವರೆಗೆ ಅಪ್ರಕಟಿತ ರೂಪದಲ್ಲಿದ್ದ ಕೋಳೂರು ಶಂಕರಕವಿಯ ಮಾಧವಾಂಕ ಚರಿತೆಯನ್ನು ಮೂರು ಹಸ್ತಪ್ರತಿಗಳ ನೆರವಿನಿಂದ ಪರಿಷ್ಕರಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.