ಗಿರಿಬಾಲೆ ಎಂದೇ ಖ್ಯಾತರಾದ ಸರಸ್ವತಿಬಾಯಿ ರಾಜವಾಡೆ ಅವರು ಉಡುಪಿಯ ಬಳಿಯ ಒಳಂಜಾಲದಲ್ಲಿ 1913 ರ ಅಕ್ಟೋಬರ್ 3 ರಂದು ಜನಿಸಿದರು.ತಂದೆ ನಾರಾಯಣ ರಾವ್. ತಾಯಿ ಕಮಲಾಬಾಯಿ. ‘ಗಿರಿಬಾಲೆ’ ಎಂಬುದು ಕಾವ್ಯನಾಮ. ಮಹಾರಾಷ್ಟ್ರ ಮೂಲದ ಇವರು ಬಡತನದಿಂದಾಗಿ ಉಡುಪಿಗೆ ಬಂದಿದ್ದು, ವಿರಕ್ತರಾದ ತಂದೆ ಮನೆ ಬಿಟ್ಟು ಹೋಗಿದ್ದು, ತಂದೆಯ ಮುಖ ಕಾಣದೇ ಬೆಳೆದರು. ಈ ಮಗುವಿನಿಂದಲೇ ಪತಿ ಮನೆ ತೊರೆದರು ಎಂದು ಊಹಿಸಿದ ತಾಯಿಯ ಪ್ರೀತಿಯಿಂದಲೂ ವಂಚಿತಳಾದಳು. ಓದುವ ಆಸಕ್ತಿ ಇತ್ತು.ತಾಯಿಯನ್ನೇ ಕಾಡಿ ಬೇಡಿ ಶಾಲೆ ಓದಿದಳು. ಚಿತ್ರರಂಗದ ಪ್ರಾರಂಭಿಕ ಯುಗವಾದ ಮೂಕಿಚಿತ್ರಗಳಲ್ಲೂ ಪಾತ್ರಧಾರಿ ಹಾಗೂ ಗಾಯಕಿಯಾಗಿದ್ದರು. 15ರ ಹರೆಯದ ಹುಡುಗಿಯನ್ನು 52ರ ವಯಸ್ಸಿನ ರಾಯಶಾಸ್ತ್ರಿ ರಾಜವಾಡೆ ಅವರಿಗೆ ಮದುವೆ ಮಾಡಿಸಿದರು.ರಾಯಶಾಸ್ತ್ರಿಗಳು ಸಿಂಗಪುರದಲ್ಲಿ ಅಕೌಂಟೆಂಟ್ ಜನರಲ್ ಆಗಿದ್ದು, ಸಾಕಷ್ಟು ಶ್ರೀಮಂತಿಕೆ ಇತ್ತು. ಆದರೆ, ಅದು ಅವರಿಗೆ ಬಂಧನ ಎಂಬಂತಿತ್ತು. ನಂತರ ಅವರು ತಂಜಾವೂರಿನಲ್ಲಿ ನೆಲೆಸಿದರು. ತಮಿಳು ಭಾಷೆ ಕಲಿತು ಮೊದಲನೇ ಕಥೆ ಬರೆದರು. ಕನ್ನಡದಲ್ಲಿ ಬರೆದ ಮೊದಲನೆ ಕಥೆ-ನನ್ನ ಅಜ್ಞಾನ. ಅದೇ ಪತಿಯ ಪ್ರೋತ್ಸಾಹದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾದರು. ಹಿಂದಿ, ತಮಿಳು, ಸಂಸ್ಕೃತ, ಇಂಗ್ಲಿಷ್, ಮರಾಠಿ, ಕನ್ನಡ ಭಾಷೆಗಳನ್ನು ಕಲಿತರು. ಅವರು 28 ವಯಸ್ಸಿನಲ್ಲಿ ವಿಧವೆಯಾದರು.
1929 ರಿಂದ ಬರಹ ಆರಂಭಿಸಿದರು. ಮೊದಲ ಕಥಾ ಸಂಕಲನ ‘ಆಹುತಿ’. 1938ರಲ್ಲಿ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಮರ್ಶಕರೊಬ್ಬರು ‘ದಿ ಅನ್‌ಕ್ರೌನ್ಡ್ ಕ್ವೀನ್ ಆಫ್ ಶಾರ್ಟ್ ಸ್ಟೋರೀಸ್’ ಎಂದು ಪ್ರಶಂಸಿದ್ದರು. ಹೀಗೆ ಬರಹ ಮುಂದುವರಿಸಿ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಖಿಲ ಕರ್ನಾಟಕ ಲೇಖಕಿಯರ ಸಂಘವು (1988) 2ನೇ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನ, 1994 ರಲ್ಲಿ ಅನುಪಮಾ ಪ್ರಶಸ್ತಿ ಪ್ರಕಟಿಸಿದಾಗ ಅದನ್ನು ಸ್ವೀಕರಿಸುವ ಮುನ್ನವೇ 1994ರ ಏಪ್ರಿಲ್ 23 ರಂದು ಅವರು ನಿಧನರಾದರು. ಸರಸ್ವತಿಬಾಯಿ ರಾಜವಾಡೆ ಅವರ ಒಟ್ಟು ಜೀವನ ಚಿತ್ರಣ ನೀಡುವ ಕೃತಿ ಇದು.
©2024 Book Brahma Private Limited.