ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 10ನೇ ಪುಸ್ತಕ ಕರ್ನಾಟಕದ ಹಾನಿಮನ್ ಡಾ. ಕೆ. ವಸಂತಕುಮಾರ ರಾವ್. ಕೈಕಂಬ ಸುಳ್ಯದ ಸಮೀಪದ ಪಂಬೆತ್ತಾಡಿ ಗ್ರಾಮದ ಕಾಂತುಕುಮೇರಿಯಲ್ಲಿ ಜನಿಸಿದ ಕೆ. ವಸಂತ ಕುಮಾರ್ ರಾವ್ ಅವರು ಎಂ.ಬಿ.ಬಿ.ಎಸ್. ಓದಿಗೆ ಅವಕಾಶ ಸಿಕ್ಕರೂ ವಯಸ್ಸಿನ ಕಾರಣದಿಂದ ಅನಿವಾರ್ಯವಾಗಿ ಓದಿದ್ದು ಬಿ.ಎ.ಎಂ.ಎಸ್.ನಲ್ಲಿ ಪ್ರಥಮ ರ್‍ಯಾಂಕ್ ಪಡೆದು ತೇರ್ಗಡೆಯಾದ ಮೇಲೆ ಮತ್ತೆ ಅರ್ಹತೆಯ ಆಧಾರದಲ್ಲಿ ಎಂ.ಬಿ.ಬಿ.ಎಸ್ ನ್ನು ಪ್ರಥಮ ದರ್ಜೆಯಲ್ಲೇ ಮುಗಿಸಿ ಚರ್ಮ ಮತ್ತು ಲೈಂಗಿಕರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ.)ಯ ಅಧ್ಯಯನದಲ್ಲಿದ್ದಾಗ ಪೋಲಿಆರ್ಟ್‌ರೈಟಿಸ್ ನೋಡೋಸಾ (P.A.N.) ಎಂಬ ತೀರಾ ಅಪರೂಪದ ಸೀಮಿತ ಚಿಕಿತ್ಸೆಯುಳ್ಳ, ಭಯಂಕರ ಎನ್ನಬಹುದಾದ ಕಾಯಿಲೆಗೆ ಒಳಗಾದ ನತದೃಷ್ಟ, ತಾನು ಓದಿದ್ದ ಅಲೋಪೆಥಿ ಮತ್ತು ಆಯುರ್ವೇದ ಚಿತ್ರಗಳ ಅನೇಕ ತಜ್ಞರ ಚಿಕಿತ್ಸೆಗಳೆಲ್ಲಾ ವಿಫಲವಾಗಿ ಸಾವನ್ನು ಎದುರುನೋಡುತ್ತಿದ್ದ ದಿನಗಳಲ್ಲಿ ಬೆಂಗಳೂರಿನಲ್ಲಿದ್ದ ಹೋಮಿಯೋತಜ್ಞ ಡಾ. ಸುಂದರರಾಯರ ಚಿಕಿತ್ಸೆ ಮತ್ತು ತನ್ನ ಮನೋಬಲದಿಂದ ಪವಾಡ ಸದೃಶರಾಗಿ ಬದುಕುಳಿದ ಚೇತನ. ಇದೇ ಕಾರಣಕ್ಕೆ (ಅಲೋಪೆಥಿ ವೈದ್ಯರಾಗಿದ್ದ ಹಾನಿಮನ್ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಕಂಡುಹಿಡಿದ ಹಾಗೆ ) ವಸಂತ ರಾಯರೂ ಹೋಮಿಯೋ ಚಿಕಿತ್ಸಾ ಪದ್ಧತಿಯಿಂದ ಆಕರ್ಷಿತರಾಗಿ ಪರಿಶ್ರಮ ಮತ್ತು ಸ್ವಾಧ್ಯಯನದಿಂದ ಹೋಮಿಯೋ ತಜ್ಞರಾಗಿ ಮೂಡಿ ಬಂದುದೊಂದು ಅಪರೂಪದ ಸಂಗತಿ. ಅಪಾರ ಮನೋಬಲ, ಅಸಾಧಾರಣ ಚಿಕಿತ್ಸಾ ಕೌಶಲ್ಯ, ನಿತ್ಯೋತ್ಸಾಹದ ಜೀವನ ಪ್ರೀತಿಯು ವಸಂತರಾಯರು ರೋಗಿಗಳ ಪಾಲಿಗೆ ಬಂಧು, ವಾಣಿಜ್ಯೀಕರಣಗೊಂಡಿರುವ ವೈದ್ಯವೃತ್ತಿಯಲ್ಲಿ ಅಪವಾದವೆಂಬಂತೆ ಅಂತಃಕರಣದಿಂದ ಸ್ಪಂದಿಸುವ ವೈದ್ಯ. ಮೂರೂ ವೈದ್ಯ ಪದ್ಧತಿಗಳನ್ನು ರೋಗಿಯ ಸುಖಕ್ಕಾಗಿ ಸಮನ್ವಯಗೊಳಿಸಬೇಕೆಂಬ ಚಿಂತಕ. ಅವರ ಜೀವನ ಸಾಧನೆಯ ಈ ಪುಸ್ತಕ ಕಟ್ಟಿಕೊಡುತ್ತದೆ.
©2024 Book Brahma Private Limited.