ಕಾಂತಾವರದ ಕನ್ನಡ ಸಂಘವು ಪ್ರಕಟಿಸಿರುವ ’ನಾಡಿಗೆ ನಮಸ್ಕಾರ’ ಸರಣಿಯ 245ನೇ ಪುಸ್ತಕ ’ತಾರಾಮೌಲ್ಯದ ಸವ್ಯಸಾಚಿ ಪತ್ರಕರ್ತ ಈಶ್ವರ ದೈತೋಟ’. ಖ್ಯಾತ ಪತ್ರಕರ್ತ ಈಶ್ವರ ದೈತೋಟ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಜನಜೀವನವನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಚಿಕಿತ್ಸಕ ದೃಷ್ಟಿಕೋನದಿಂದ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಪತ್ರಿಕಾ ಓದುಗರಿಗೂ, ಸಾಹಿತ್ಯ ರಂಗದ ವಾಚಕರಿಗೂ ಚಿರಪರಿಚಿತರಾಗಿದ್ದಾರೆ. ಅಭ್ಯುದಯ ಪತ್ರಿಕೋದ್ಯಮದ ಮುಂಚೂಣಿಯಲ್ಲಿದ್ದು, ನಾಡಿನಾದ್ಯಂತ ವಿಶೇಷ ಜನಪ್ರಿಯತೆ ಗಳಿಸಿರುವ ಅವರ ಲೇಖನಿಯಿಂದ ವಿಶಿಷ್ಟ ಕಳಕಳಿಯ ಲೇಖನಗಳು ಮೂಡಿಬಂದಿವೆ” ಎಂದು ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಈಶ್ವರ ದೈತೋಟ ಕನ್ನಡದ ವಿವಿಧ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿರುವುದಲ್ಲದೆ ಆಕಾಶವಾಣಿ, ಟಿ.ವಿ. ಮತ್ತು ಅಂತರ್ಜಾಲ ಮಾಧ್ಯಮಗಳಲ್ಲೂ ಕೆಲಸ ಮಾಡಿ ಸವ್ಯಸಾಚಿ ಪತ್ರಕರ್ತರೆನಿಸಿಕೊಂಡಿದ್ದಾರೆ. ಕನ್ನಡದ ಅಭ್ಯುದಯ ಪತ್ರಿಕೋದ್ಯಮದ ಆದ್ಯರಾದ ಅವರು 'ಉದಯವಾಣಿ' ಯಲ್ಲಿರುವಾಗ ಕುಗ್ರಾಮ ಗುರುತಿಸುವ ಸಾಮಾಜಿಕ ಚಳುವಳಿಯನ್ನು ನಡೆಸಿ ಗ್ರಾಮಾಭಿವೃದ್ಧಿಗೆ ವಿನೂತನ ದಾರಿ ತೋರಿಸಿದ್ದು ಈಗ ಇತಿಹಾಸ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಮತ್ತು ಕನ್ನಡ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿದ್ದ ದೈತೋಟ ಅವರಿಗೆ ಟಿ.ಎಸ್.ಆರ್. ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
©2024 Book Brahma Private Limited.