ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 19ನೇ ಪುಸ್ತಕ ಮಕ್ಕಳ ಸಾಹಿತ್ಯದ ಹಿರಿಯ ಪಳಕಳ ಸೀತಾರಾಮ ಭಟ್ಟ. ಕಳೆದ ಆರು ದಶಕಗಳಿಂದ ಶಿಶುಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಪ.ಸೀ. ಭಟ್ಟರು ಒಂದು ನೂರ ಹತ್ತು ಕೃತಿಗಳನ್ನು ಮಕ್ಕಳಿಗಾಗಿ ರಚಿಸಿದ ಹಿರಿಯ ಮಕ್ಕಳ ಸಾಹಿತಿ. ಪ್ರೌಢ ಸಾಹಿತ್ಯ ಕೃತಿಗಳನ್ನೂ ರಚಿಸಿದ ಹೆಗ್ಗಳಿಕೆಯ ಅವರು ಆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಹನ್ನೊಂದು. ಮೂಡಬಿದ್ರೆಯು ಜೈನ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವ ಅವರು 1960ರ ಸುಮಾರಿಗೆ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದವರು. ನಾಡಿನ ವಿವಿಧ ಕಡೆಗಳಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಯ ಅಧ್ಯಕ್ಷರಾಗಿ, ಸರ್ವಾಧ್ಯಕ್ಷರಾಗಿ ಗೌರವ ಸಂದಿದೆ. 1996ರಲ್ಲಿ ಹಾಸನದಲ್ಲಿ ನಡೆದ ಅ.ಭಾ.ಕ.ಸಾ. ಸಮ್ಮೇಳನದ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. "ಶಿಶು ಸಾಹಿತ್ಯಮಾಲೆ," ಅವಿಭಜಿತ ದ.ಕ.ದ ಮಕ್ಕಳ ಸಾಹಿತ್ಯ ಸಂಗಮದಂತಹ ಸಂಸ್ಥೆಗಳ ಕನಸೂ ನೆನಸು ಮಾಡಿದವರು. ಶಿಶುಸಾಹಿತಿಗಳನ್ನು ಪೋಷಿಸುವಲ್ಲಿಯೂ ಅವರು ಮುಂದು. ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು ಅವರ ಕವನಗಳನ್ನು ಬಳಸಿವೆ. ನವದೆಹಲಿಯ ಪ್ರತಿಷ್ಠಿತ ಬಾಲಶಿಕ್ಷ ಪರಿಷತ್ ಪ್ರಶಸ್ತಿ, ಕ.ಸಾ.ಪ.ದ. ರಾಜರತ್ನಂ ದತ್ತಿ ನಿಧಿ ಮತ್ತು ವಸುದೇವ ಭೂಪಾಲಂ ದತ್ತಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಶಿವರಾಮ ಕಾರಂತ ಗೌರವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೊ. ಅ. ಉಡುಪ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ ಅವರನ್ನು ಅರಸಿ ಬಂದಿವೆ. ಸ್ಥಳೀಯ ಶಿಕ್ಷಣ ಸಂಸ್ಥೆ, ಸಹಕಾರಿ ಸಂಘಗಳಲ್ಲೂ ಅವರು ತೊಡಗಿಸಿಕೊಂಡಿದ್ದರು. ಮೆಲುಮಾತಿಗೆ ಜೀವನ ಪ್ರೀತಿಗೆ ಹೆಸರಾದವರು. ಸೀತಾರಾಮಭಟ್ಟರ ಪರಿಚಯ ಒದಗಿಸುವ ಕೃತಿಯಿದು.
©2024 Book Brahma Private Limited.