ಲೇಖಕ ಡಾ. ವಸಂತ ಕುಮಾರ ಅವರು ಉಡುಪಿ ಜಿಲ್ಲೆಯ ಕಾರ್ಕಳದವರು. ಸದ್ಯ ಉಡುಪಿಯಲ್ಲಿ ವಾಸ. ಬಿ.ಎ. (1998), ಎಂ.ಎ. (1990) ಮತ್ತು ‘ಕವಿಸಾಳ್ವನ ರಸ ರತ್ನಾಕರ: ಒಂದು ಅಧ್ಯಯನ’ ವಿಷಯವಾಗಿ ಎಂ.ಫಿಲ್ (1991) ಹಾಗೂ `ರನ್ನನ ಕೃತಿಗಳಲ್ಲಿ ಕಾವ್ಯತತ್ವ ' (2005) ವಿಷಯವಾಗಿ ಪಿಎಚ್ ಡಿ ಪಡೆದರು.
ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು (1992-93), ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು (1993-95), ಎರ್ನಾಕುಲಂ ನಲ್ಲಿಯ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿ.ವಿ. (1995-97) ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು (1997 ಅಕ್ಟೋಬರ್ ವರೆಗೆ), ನಂತರ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹೀಗೆ ಒಟ್ಟು 28 ವರ್ಷ ಕಾಲ ಬೋಧನಾನುಭವವಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಕೃತಿಗಳು: 1. ಕ್ರಿಯಾತ್ಮಕ ಕನ್ನಡ 2. ರೈತ ಬಂಧು ಶಿವಪುರದ ಸುಬ್ಬಣ್ಣ ನಾಯಕ್ 3. ಸಾಂಸ್ಕೃತಿ ರಾಯಭಾರಿ ಪ್ರೊ. ಕೃಷ್ಣ ಭಟ್ ಅರ್ತಿಕಜೆ 4. ಯಕ್ಷಗಾನದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಶಿ 5. ಬಸವಣ್ಣ ಮತ್ತು ವರ್ತಮಾನದ ಬದುಕು 6. ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾವ್ 7. ಬಹುಮುಖ ಪ್ರತಿಭೆಯ ಕನಸುಗಾರ ಯು.ಎಸ್. ನಾಯಕ್ 8.ನವೋದಯದ ಸ್ತ್ರೀವಾದಿ ಲೇಖಕಿ ಗಿರಿಬಾಲೆ (ಸರಸ್ವತಿ ಬಾಯಿ ರಾಜವಾಡೆ) ಮತ್ತು ಮಂಗಳೂರು ವಿವಿ ಕನ್ನಡ ಪಠ್ಯ ಪುಸ್ತಕ ಮಂಡಳಿಯ ಸದಸ್ಯರಾಗಿ ಸಂಪಾದಿಸಿದ ಪಠ್ಯ ಪುಸ್ತಕಗಳ ಪೈಕಿ ಮಂಗಳೂರು ವಿವಿ ಯಲ್ಲಿಇವರ ಪುದುವೆ ಕೃತಿ (ಬಿಬಿಎಂ ಪ್ರಥಮ), ಕಾವೇರಿ ಕೃತಿ (ಬಿಸಿಎ ಪ್ರಥಮ) ಹಾಗೂ ನುಡಿ ವಿವೇಕ ಕೃತಿ (ಬಿಬಿಎ ದ್ವಿತೀಯ) ಪಠ್ಯಗಳಾಗಿದ್ದವು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾಮಟ್ಟದ ಕಾಲೇಜು ಸಣ್ಣ ಕಥಾ ಸ್ಪರ್ಧೆ (1987) ಯಲ್ಲಿ ದ್ವಿತೀಯ ಬಹುಮಾನ, ಮಂಗಳೂರು ವಿವಿ ಮಟ್ಟದ ಛಾಯಾಚಿತ್ರ ಸ್ಪರ್ಧೆ (1988)ಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಯಕ್ಷಗಾನ, ಫೋಟೋಗ್ರಫಿ ಹಾಗೂ ಕೃಷಿ -ಇವರ ಆಸಕ್ತಿಯ ವಲಯಗಳು.