ಕಾಂತಾವರ ಕನ್ನಡ ಸಂಘದ ನಾಡಿಗೆ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 12ನೇ ಪುಸ್ತಕ ಪತ್ರಕರ್ತರ ಆಚಾರ್ಯ ಪಾ.ವೆಂ. ಆಚಾರ್ಯ. ’ ಪಾವೆಂ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಪಾಡಿಗಾರು ವೆಂಕಟರಮಣಾಚಾರ್ಯ ಅವರು ’ಕಸ್ತೂರಿ’ ಪತ್ರಿಕೆಯನ್ನು ರೂಪಿಸಿದವರು. ವಿಸ್ತಾರವಾದ ಓದು, ವೈವಿಧ್ಯಮಯ ಬರೆಹಗಳು ಪಾವೆಂ ಅವರದ್ದಾಗಿದ್ದವು. ಬಹು ಶ್ರುತತ್ವ ಅವುಗಳ ವೈಶಿಷ್ಟ್ಯ. ಮಾಸ್ತರಿಕೆ, ಕಾರಕೂನಿಕೆ, ಹೋಟೇಲಿನ ಬಿಲ್‌ರೈಟರ್ ಮೊದಲಾದ ಕೆಲಸಗಳನ್ನು ಬದುಕಿನ ಮೊದಲ ದಿನಗಳಲ್ಲಿ ಮಾಡಿದ್ದರು. ಕೊನೆಗೆ ಅವರು ಬಂದು ಸೇರಿದ್ದು ಪತ್ರಿಕೋದ್ಯಮಕ್ಕೆ. ಎಂದೂ ಜರ್ನಲಿಸಂನ ಪಾಠವನ್ನು ಸ್ವತಃ ಹೇಳಿಸಿಕೊಳ್ಳದ ಅವರು ಬದುಕಿದ ಮತ್ತು ಬರೆದ ರೀತಿ ಇಂದಿನ ಪತ್ರಕರ್ತರಿಗೆ ಮಾದರಿಯಾಗಬಲ್ಲ ಪಠ್ಯ ಮತ್ತು ಪಾಠದ ಹಾಗೆ ಇದೆ. ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಸಾಧ್ಯ ಎನ್ನಬಹುದಾಗಿದ್ದ, 'ರೀಡರ್ ಡೈಜೆಸ್ಟ್'ನಂಥ ಮಾಸಪತ್ರಿಕೆಯ ಸೃಜನಶೀಲ ಧಾರಣ ಶಕ್ತಿ ಕನ್ನಡ ಭಾಷೆಗೂ ಇದೆ ಎಂಬುದನ್ನು ಅವರು, ’ಕಸ್ತೂರಿ'ಯ ಮೂಲಕ ರುಜುವಾತು ಪಡಿಸಿದರು. "ಪದಾರ್ಥ ಚಿಂತಾಮಣಿ"ಯಂತಹ ಅಪರೂಪದ ಶಬ್ದಾರ್ಥಗಳನ್ನು ಅವರು ಸದಾ ಬೆನ್ನು ಹತ್ತಿದ್ದರು. ಅವರೊಳಗೆ ಇದ್ದ ಒಬ್ಬ ಅಪರೂಪದ ಕವಿ ಮತ್ತು ಕತೆಗಾರನನ್ನು ಪೂರ್ಣ ಪ್ರಮಾಣದಲ್ಲಿ ಹೊರಹಾಕಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರೊಳಗೆ ಅಡಗಿ ಕುಳಿತಿದ್ದ ಸಜ್ಜನ ಚಿಂತಕ ಮಾತ್ರ ಬರಹಗಳಲ್ಲಿ ಕಾಣಿಸುತ್ತಿದ್ದ. ಪಾ.ವೆಂ. ಅವರನ್ನು ಕುರಿತ ಪರಿಚಯಾತ್ಮಕ ಕೃತಿಯಿದು.
©2024 Book Brahma Private Limited.