ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ - ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹದಿಮೂರನೆಯ ಪುಸ್ತಕ ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ. ಸೃಜನಶೀಲತೆ ಮತ್ತು ಸಂಶೋಧನಾ ಪ್ರಜ್ಞೆ ಎರಡನ್ನೂ ಜೊತೆಯಾಗಿ ಜಾನಪದ ಲೋಕಕ್ಕೆ ಧಾರೆ ಎರೆದ ಹಾಗೆ ಬದುಕುತ್ತಿರುವ ಡಾ. ಅಮೃತ ಸೋಮೇಶ್ವರ ಅವರು ನಾಡು ಕಂಡ ಅಪರೂಪದ ಜಾನಪದ ತಜ್ಞ ಅಷ್ಟೇ ಅಲ್ಲ, ಹಿರಿಯ ವಿದ್ವಾಂಸರೂ ಕೂಡಾ. ಕನ್ನಡ ಮತ್ತು ತುಳು ಭಾಷೆಯಲ್ಲಿ ಸುಮಾರು 80ರಷ್ಟು ಕೃತಿಗಳನ್ನು ರಚಿಸಿರುವ ಅವರ ಆಸಕ್ತಿ ಮತ್ತು ಅಭಿರುಚಿಗಳು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಮಾನ. ಸಣ್ಣಕತೆ, ಕವಿತೆ, ವಿಮರ್ಶೆ, ಸಂಶೋಧನೆ, ನಾಟಕ, ಅನುವಾದ, ನೃತ್ಯರೂಪಕ, ಜಾನಪದ, ಸ್ವತಂತ್ರ ಗಾದೆಗಳು, ವಿನೋದಕೋಶ, ಶಬ್ದಕೋಶ, ಕಾದಂಬರಿ ಹೀಗೆ ಅವರ ಬರಹಗಳು ವೈವಿಧ್ಯಮಯ ಮತ್ತು ಜೀವನಾನುಭವಗಳಿಂದ ಸಮೃದ್ಧ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪಾರ್ತಿಸುಬ್ಬ, ಪೊಳಲಿ ಶೀನಪ್ಪ ಹೆಗ್ಡೆ, ಕು.ಶಿ. ಹರಿದಾಸ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಗುಂಡ್ಮಿ ಚಂದ್ರಶೇಖರ ಐತಾಳ, ಕುಕ್ಕಿಲ, ಕರ್ಕಿ, ಕೊ.ಅ. ಉಡುಪ ಹೆಸರಿನ ಪ್ರಶಸ್ತಿಗಳ ಜೊತೆ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಬೈದ್ಯಶ್ರೀ ಜಾನಪದ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಮಂಗಳೂರು ವಿ.ವಿ.ಯು 2000ರಲ್ಲಿ ಆ ಗೌರವ ಡಾಕ್ಟರೇಟ್ ನೀಡಿದೆ. ಅಖಿಲ ಭಾರತ ತುಳುಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆಗಳ ಜೊತೆ ವಿದೇಶಿ ಸಂಸ್ಥೆಗಳಿಂದಲೂ ಸನ್ಮಾನಿತರಾಗಿರುವ ಅವರು ಪ್ರಾಧ್ಯಾಪಕರಾಗಿ, ಈಗ ನಿವೃತ್ತರು. ಅವರ ಜೀವನ ಸಾಧನೆಯನ್ನು ಈ ಕೃತಿ ಪರಿಚಯಿಸುತ್ತದೆ.
©2024 Book Brahma Private Limited.