ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 191 ಪುಸ್ತಕ 'ಎಲ್ಲೆಲ್ಲು ಕನ್ನಡದ ಕಂಪು ಹರಡಿದ ಎನ್.ಪಿ. ಭಟ್ಟ’. ಎನ್.ಪಿ. ಭಟ್ಟ ಎಂದು ಚಿರಪರಿಚಿತರಾಗಿದ್ದ ನಾರಾಯಣ ಪರಮೇಶ್ವರ ಭಟ್ಟ ಅವರು ಅಖಿಲ ಭಾರತ ಮಟ್ಟದ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1958ರಲ್ಲಿ ಮದ್ರಾಸಿನಲ್ಲಿ ಆದಾಯಕರ ತೆರಿಗೆ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು.1962ರಲ್ಲಿ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂ.ಎ. ಪರೀಕ್ಷೆ ಬರೆಯಲು ಹಣವಿಲ್ಲದ್ದರಿಂದ ಸಾಲ ಮಾಡಿ-ಉದ್ಯೋಗಕ್ಕೆ ರಜೆ ಹಾಕಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸೂರತ್, ಇಂದೋರ್ ಮತ್ತು ದೆಹಲಿಯಲ್ಲಿ ಕಾರ್ಯ ನಿರ್ವಹಸಿದ್ದರು. ವಿ.ಕೃ. ಗೋಕಾಕ್ ಅವರ ಪುತ್ರಿ ಯಶೋಧಾ ಅವರನ್ನು ಮದುವೆಯಾಗಿದ್ದ ಎನ್.ಪಿ. ಭಟ್ಟ ಅವರು ಸಣ್ಣಕತೆಗಳನ್ನು ನಾರಂಗಿ ಭಟ್ಟ, ರಂಜನ ಭಟ್ಟ ಹೆಸರಿನಲ್ಲಿ ಪ್ರಕಟಿಸಿದ್ದರು. ದಕ್ಷಿಣ ಧ್ರುವ ನಕ್ಕಾಗ (1955) ಕತಾ ಸಂಕಲನವು ಧಾರವಾಡದ ಪ್ರತಿಭಾ ಮುದ್ರಣಾಲಯದಿಂದ ಪ್ರಕಟವಾಗಿತ್ತು. ’ಅಲ್ಲಿ ಇಲ್ಲಿಯ ಕತೆಗಳು’ (1985) ಕತಾ ಸಂಕಲನವನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿತ್ತು. ಹೆಮ್ಮರಗಳು ತಲೆಯೆತ್ತಿವೆ (1984) ಕವನ ಸಂಕಲನವನ್ನು ಅನನ್ಯ ಪ್ರಕಾಶನ ಪ್ರಕಟಿಸಿದೆ. ಅವರ ಕುಬೇರ ರಾಜ್ಯ ಚಿತ್ರ-ವಿಚಿತ್ರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮನದಾಳದ ಮುತ್ತು ರತ್ನಗಳು, ನೆನಪಿನ ಉಯ್ಯಾಲೆ ಅವರ ಪ್ರಕಟಿತ ಕೃತಿಗಳು.
©2024 Book Brahma Private Limited.