ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 17ನೇ ಪುಸ್ತಕ. ಕುಂಬಳೆ ಎನ್ನುವುದು ಕಾಸರಗೋಡು ಸಮೀಪದ ಒಂದು ಪುಟ್ಟ (ಊರಿನ) ಪೇಟೆಯ ಹೆಸರು. ಆ ಹೆಸರಿಗೆ ಸಾರ್ಥಕ್ಯ ತಂದುಕೊಟ್ಟವರು ಇಬ್ಬರು: ಕ್ರಿಕೆಟ್‌ನ ಅನಿಲ್ ಕುಂಬ್ಳೆ ಮತ್ತು ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕ ಕುಂಬಳೆ ಸುಂದರರಾವ್. ಸುಂದರರಾವ್ ಎಂದೊಡನೆ ಕಣ್ಣಮುಂದೆ ಬರುವುದು ಅವರ ಮಾತು. ಆರು ದಶಕಗಳ ಕಲಾ ಜೀವನದಲ್ಲಿ ಅವರು ರಾಮ, ಕೃಷ್ಣ, ಭರತ, ಉತ್ತರ, ಸುಧನ್ವ, ಚಾರ್ವಾಕರಂಥ ಹಲವು ಪಾತ್ರಗಳನ್ನು ನಮ್ಮ ನಡುವೆ ಮತ್ತೆ ಮತ್ತೆ ಸೃಷ್ಟಿಸಿದರು. ಆಯಾ ಪಾತ್ರಗಳ ಜೊತೆ ನಾವೂ ಕುಳಿತು ಮಾತನಾಡುವ ಹಾಗೆ ಮಾಡಿದರು. ನಮ್ಮಲ್ಲಿ ಈ ಪಾತ್ರಗಳು ಇರುವುದನ್ನು ನಾವೇ ನೋಡುವ ಹಾಗೆ ಬೆಟ್ಟು ಮಾಡಿ ತೋರಿಸಿದರು. ಕೂಡ್ಲು, ಕುಂಡಾವು, ಸುರತ್ಕಲ್, ಧರ್ಮಸ್ಥಳ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರಗಳಲ್ಲಿ ಅರ್ಥವನ್ನು ಸೃಷ್ಟಿಸುವ ಅರ್ಥಧಾರಿಯಾಗಿ ತೊಡಗಿಸಿಕೊಂಡ ಅವರ ಮಾತು ಅವರದ್ದೇ. ಅದು ಪುರಾಣದ್ದೂ ಹೌದು, ವರ್ತಮಾನದ್ದೂ ಹೌದು. ಸಹಜವೂ ಸುಭಗವೂ ಸುಲಲಿತವೂ ಆಗಿ ನಾವು ಆ ಮಾತಿನಿಂದ ಹೊರಬಾರದ ಹಾಗೆ, ಆ ಮೋಡಿ ಅದ್ಭುತ ಮತ್ತು ರಮ್ಯ. ಕುಂಬಳೆರಾಯರನ್ನು ಪರಿಚಯಿಸುವ ಕೃತಿಯಿದು.
©2024 Book Brahma Private Limited.