ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 204ನೇ ಪುಸ್ತಕ ಡಾ. ಎಂ. ವೀರಪ್ಪ ಮೊಯಿಲಿ. ಹಿರಿಯ ಸಾಹಿತಿ, ರಾಜಕೀಯ ಮುತ್ಸದ್ದಿ. ಡಾ. ಎಂ. ವೀರಪ್ಪ ಮೊಯಿಲಿ ರಾಜಕೀಯ ಕ್ಷೇತ್ರದಲ್ಲಿ ತನ್ನ ದೂರದೃಷ್ಟಿಯ ಚಿಂತನೆಯಿಂದ ರಾಷ್ಟ ಮಟ್ಟದ ನಾಯಕರಾಗಿ ಖ್ಯಾತರಾಗಿದ್ದಾರೆ. ತುಳು ಮಾತೃ ಭಾಷೆಯ ಎಂ.ವೀರಪ್ಪ ಮೊಯಿಲಿಯವರು ಕನ್ನಡ ಸಾಹಿತಿಯಾಗಿಯೂ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಪೂರ್ವ ಸಾಧಕ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಹಂಪಿಯ ಕನ್ನಡ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿ.ವಿ., ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ., ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮಂಗಳೂರು ವಿ.ವಿ. ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯ-ಹೀಗೆ ಆರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಹಿರಿಮೆ ಅವರದು. ಆರ್ಥಿಕ ತಜ್ಞರಾಗಿ ಖ್ಯಾತರಾಗಿರುವ ಮೊಯಿಲಿಯವರ ಸಾಧನೆಗಳ ಕಿರುನೋಟ ಈ ಕೃತಿಯಲ್ಲಿದೆ. ಸಾಹಿತಿಯಾಗಿ 'ಶ್ರೀರಾಮ ಮಹಾನ್ವೇಷಣಂ' ಮಹಾಕಾವ್ಯಕ್ಕೆ ಮೂರ್ತಿದೇವಿ ಪ್ರಶಸ್ತಿ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿರುವ ಮೊಯಿಲಿಯವರು ದೌಪದಿಯ ಕುರಿತಾದ ಮಹಾಕಾವ್ಯವನ್ನೂ ರಚಿಸಿದ್ದಾರೆ. ಕಾದಂಬರಿಗಳು, ನಾಟಕಗಳು, ಕವನಸಂಕಲನಗಳ ಸಹಿತ ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೊಯಿಲಿಯವರು ಇಂಗ್ಲಿಷ್ ಭಾಷೆಯಲ್ಲಿ ಚಿಂತನಪರ ಬರಹಗಳ ಅಂಕಣಕಾರರೂ ಹೌದು. ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ.
©2024 Book Brahma Private Limited.