ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 212ನೇ ಪುಸ್ತಕ ಬಿ.ಹೆಚ್. ಶ್ರೀಧರ್. ವಾತ್ಸಲ್ಯದ ಸಿರಿ ಸಾಹಿತ್ಯದ ಗರಿ ಬಿ.ಹೆಚ್. ಶ್ರೀಧರ್ ಆಧುನಿಕ ಕನ್ನಡದ ಅಪೂರ್ವ ವಿದ್ವತ್ ಕವಿ. ಬಿ.ಎಚ್. ಶ್ರೀಧರರು (1918-1990) ವಿದ್ವತ್ತಿಗೂ, ಕವಿತ್ವಕ್ಕೂ ಹೆಸರಾದ ಕುಂದಾಪುರ ತಾಲೂಕಿನ ಬವುಳಾಡಿ ಹೆಬ್ಬಾರರ ಮನೆತನದವರು. ಮುದ್ದಣನ ಗುರುಗಳಾಗಿದ್ದ ಬವುಳಾಡಿ ವೆಂಕಟರಮಣ ಹೆಬ್ಬಾರರು ಬಿ.ಎಚ್. ಶ್ರೀಧರರ ದೊಡ್ಡಪ್ಪ, ಕವಿ ಗೋಪಾಲಕೃಷ್ಣ ಅಡಿಗರು ಬಿ.ಎಚ್. ಶ್ರೀಧರರ ಸೋದರಳಿಯ. ಶ್ರೀಧರ್ ಅವರು ಪೂನಾ, ಹುಬ್ಬಳ್ಳಿ, ಭಟ್ಕಳ, ಕುಮಟಾ, ಸಿದ್ದಾಪುರಗಳಲ್ಲಿ ಶೈಕ್ಷಣಿಕ ಹುದ್ದೆಗಳಲ್ಲಿದ್ದು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದರು. ಅವರ 'ಕಂಟಕಾರಿ ಮಹಾಕಾವ್ಯಂ' ಎಂಬ ಮಹಾನ್ ವಿಡಂಬನಾ ಕಾವ್ಯ ಸಾರಸ್ವತ ಲೋಕಕ್ಕೆ ಶ್ರೀಧರರ ಒಂದು ವಿಶೇಷ ಕೊಡುಗೆ. ಅವರ 'ಜಾತವೇದ' ಕವನ ಸಂಕಲನಕ್ಕೆ ಮುನ್ನುಡಿ ಬರೆದ ವಿ.ಕೃ. ಗೋಕಾಕ್‌ರು ಹೀಗೆ ಹೇಳಿದ್ದಾರೆ: “ನವೋದಯದ ನಿತ್ಯೋತ್ಸವದಲ್ಲಿ ಶ್ರೀಧರರು ಅನೇಕ ದೀಪಗಳನ್ನು ಹಚ್ಚಿದ್ದಾರೆ. ವಿಚಾರ ಪ್ರಧಾನ ಹಾಗೂ ವಿಡಂಬನಾತ್ಮಕ ಕಾವ್ಯ, ವಿಮರ್ಶೆ ಇವು ಅವರ ಮೆಚ್ಚಿನ ಕ್ಷೇತ್ರಗಳು. ಅಲ್ಲಿ ಜನಮನವನ್ನು ಮೆಚ್ಚಿಸುವ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅವರು 50ಕ್ಕೂ ಮಿಕ್ಕಿ ಕೃತಿಗಳನ್ನು ಕೊಟ್ಟಿದ್ದು ಅವರ ಸಮಗ್ರ ಸಾಹಿತ್ಯ ಕಾವ್ಯ ಮತ್ತು ವಿಮರ್ಶೆ ಎಂಬ ಎರಡು ಸಂಪುಟಗಳಲ್ಲಿ ಲಭ್ಯವಿದೆ.
©2024 Book Brahma Private Limited.