‘ಉಡುಪಿ ಜಿಲ್ಲೆಯ ಶತಮಾನದ ಕತೆಗಳು’ (2007) ಡಾ. ಭಟ್ ಅವರು ಸಂಪಾದಿಸಿರುವ ಮಹತ್ವದ ಗ್ರಂಥ. ಕನ್ನಡದ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣ ಕತೆಯೂ ಒಂದು. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕತೆಗಳನ್ನು ಅತ್ಯಂತ ಸೊಗಸಾಗಿ ಸಂಪಾದಿಸಿಕೊಟ್ಟಿದ್ದು ಇದನ್ನು 74 ನೆಯ ಕನ್ನಡ ಸಮ್ಮೇಳನ (2007) ದ ಉಡುಪಿ ಸ್ವಾಗತ ಸಮಿತಿ ಪ್ರಕಟಿಸಿದೆ. “ದಕ್ಷಿಣ ಕನ್ನಡದವರಿಗೆ ರಾಜ್ಯದ ಬೇರೆ ಕಡೆಗಳಲ್ಲಿ ಸಿಗದ ವಿಶೇಷ ಅನುಭವಗಳಿವೆ. ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಅನುಭವ, ಗಾಂಧಿವಾದ, ಸಮಾಜ ಸುಧಾರಣೆಗಳು, ಅಸ್ಪೃಶ್ಯತಾ ನಿವಾರಣೆ, ವಿವಿಧ ಸಮುದಾಯಗಳು, ಜಾತಿಗಳು, ಮತಧರ್ಮಗಳು ಮತ್ತು ಅವುಗಳನ್ನು ಅನುಸರಿಸುವವರ ಸುಖ ಕಷ್ಟಗಳು, ದುಡಿದರೆ ಮಾತ್ರ ಉಣ್ಣಬಹುದಾದ ಕರ್ಮಭೂಮಿಯಾದ ಈ ಜಿಲ್ಲೆಯ ಜನ ಉದ್ಯೋಗಾರ್ಥವಾಗಿ ವಲಸೆ ಹೋಗಬೇಕಾದುದು, ಸ್ವಾತಂತ್ಯ್ರಾನಂತರದ ರಾಜಕಾರಣ, ಮತೀಯ ಸಾಮರಸ್ಯ ಹದಗೆಡುತ್ತಾ ಹೋದ ವಿಚಾರ, ಭೂತ-ನಾಗ-ದೈವ-ದೇವರುಗಳ ರಾಜ್ಯವಾದ ಈ ಜಿಲ್ಲೆಯಲ್ಲಿ ಅವುಗಳ ಜತೆಗೆ ಜನರ ಸಹಬಾಳ್ವೆ, ಇವೆಲ್ಲವುಗಳ ನಡುವೆ ವ್ಯಕ್ತಿ ವೈಶಿಷ್ಟ್ಯ - ಸನ್ನಿವೇಶ ವಿಶೇಷಗಳಿಂದ ಕೂಡಿದ ಇಲ್ಲಿನ ಸಾಮಾನ್ಯರ ಬದುಕು - ಎಲ್ಲವೂ ನಮ್ಮ ಕತೆಗಳಲ್ಲಿ ದಾಖಲಾದ ರೀತಿಯನ್ನು ತೋರಿಸಲು ಈ ಪ್ರಾತಿನಿಧಿಕ ಕತೆಗಳು ನೆರವಾಗುತ್ತವೆ”, ಎಂಬ ನಿಲುವಿನಲ್ಲಿ ತಥ್ಯವಿದೆ. ಕನ್ನಡ ಕತೆಗಳ ಸಂಪಾದನ ಕಾರ್ಯ ಹೇಗೆ ನಡೆಯಬೇಕು ಎಂಬುವುದಕ್ಕೂ ಪ್ರಸ್ತುತ ಕೃತಿ ಮಾದರಿಯಾಗಿದೆ ಎಂಬುದು ಡಾ. ಜಿ. ಎನ್. ಉಪಾಧ್ಯ ಅವರ ಮಾತು.
©2024 Book Brahma Private Limited.