ಹಿರಿಯ ಸಾಹಿತಿ ಪ್ರೊ. ಎಚ್.ಎಸ್. ಹರಿಶಂಕರ ಹಾಗೂ ಎಚ್.ಎಸ್. ಗೋಪೀನಾಥ ಅವರು ಜಂಟಿಯಾಗಿ ಲೇಖಕ ಎಚ್.ಎಂ. ಶಂಕರ ನಾರಾಯಣರಾಯರ ಬರಹಗಳನ್ನು ಸಂಪಾದಿಸಿದ್ದಾರೆ. ಎಚ್.ಎಂ. ಶಂಕರ ನಾರಾಯಣ ರಾಯರ ಮೂಲ ಊರು ದಾವಣಗೆರೆ ಜಿಲ್ಲೆಯ ಹರಿಹರ. ಮೈಸೂರಿನಲ್ಲಿ ಶಿಕ್ಷಣಕ್ಕಾಗಿ ಬಂದಾಗ ಇವರಿಗೆ ಪ್ರೊ.ಟಿ.ಎಸ್. ವೆಂಕಣ್ಣಯ್ಯ, ಡಾ. ಶ್ರೀಕಂಠಶಾಸ್ತ್ರಿ, ತೀ.ನಂ.ಶ್ರೀ., ಡಿ.ಎಲ್.ಎನ್., ಪ್ರೊ.ಎ. ಆರ್.ಕೃಷ್ಣಶಾಸ್ತ್ರಿ, ಕೆ.ವೆಂಕಟರಾಮಪ್ಪ, ಡಾ.ಎ.ಎನ್.ನರಸಿಂಹಯ್ಯ ಮುಂತಾದವರು ವಾರಾನ್ನದ ವ್ಯವಸ್ಥೆ ಮಾಡಿದ್ದರು. ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. 1945 ರಲ್ಲಿ ಮೈಸೂರಿನಲ್ಲಿ ಶಾರದಾ ವಿಲಾಸ ಕಾಲೇಜು ಪ್ರಾರಂಭವಾದಾಗ ಉಪನ್ಯಾಸಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ (1975) ನಿವೃತ್ತರಾದರು. 25ಕ್ಕೂ ಹೆಚ್ಚು ಕೃತಿಗಳನ್ನು ಬರೆದರು. ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿಗಳು ಲಭಿಸಿವೆ. ಕವಿ ರಾಘವಾಂಕ, ಚಂದ್ರಗುಪ್ತ ವಿಜಯ, ಕೆಂಪು ನಾರಾಯಣ, ಮುದ್ರೆಯುಂಗುರ, ಮೃಚ್ಛಕಟಿಕ ಪ್ರಕರಣ, ಕರ್ನಾಟಕ ಶಾಕುಂತಲ ನಾಟಕ, ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ, ಹರಿಹರ ದೇವಾಲಯ, ಯಶೋಧರ ಚರಿತೆ, ಮಧ್ಯಮ ವ್ಯಾಯಾಮ ಯೋಗ ಮುಂತಾದವು ಅವರ ಕೃತಿಗಳು. ಇವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ -ಶಾರದಾ ಮಂದಿರ. ಇದನ್ನು ಅವರ ಪುತ್ರ ಎಚ್.ಎಸ್. ಹರಿಶಂಕರ ಅವರು ಮುನ್ನಡೆಸುತ್ತಿದ್ದಾರೆ. ಇವರ ಬರಹಗಳನ್ನು ಸಂಪಾದಿಸಿದ ಕೃತಿ ಇದು.
©2024 Book Brahma Private Limited.