ಪ್ರಾಚೀನ ಕನ್ನಡ ಕಾವ್ಯ ಸಂಗ್ರಹ ಕೃತಿಯನ್ನು ಡಾ. ಕಲ್ಯಾಣರಾವ್ ಜಿ. ಪಾಟೀಲರು ಸಂಪಾದಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪ್ರಥಮ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಪಠ್ಯಪುಸ್ತಕವಿದು. ಹಳಗನ್ನಡದ ಸಾಹಿತ್ಯದ ಪ್ರಮುಖ ಎಂಟು ಕಾವ್ಯಗಳಲ್ಲಿ ಅಡಗಿರುವ ಮಹತ್ವದ ಭಾಗಗಳನ್ನು ಇಲ್ಲಿ ಆಯ್ಕೆ ಮಾಡಿದೆ. ಮೊದಲಿಗೆ ‘ಶಾಸನ ಸಂಪದ’ ಶೀರ್ಷಿಕೆಯಲ್ಲಿ ಕನ್ನಡದ ಪ್ರಮುಖ ಶಾಸನಗಳಾದ ಬಾದಾಮಿ ಶಾಸನ, ಶ್ರವಣಬೆಳಗೊಳ ಶಾಸನ, ಕುಕ್ರ್ಯಾಲ ಶಾಸನ, ಸೊರಬ ಶಾಸನಗಳನ್ನು ಸಂಗ್ರಹಿಸಿದೆ. ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ’ ಶೀರ್ಷಿಕೆಯಲ್ಲಿ ಶ್ರೀವಿಜಯನ ಕವಿರಾಜಮಾರ್ಗದಲ್ಲಿನ ಮಹತ್ವದ ಪದ್ಯಗಳನ್ನು ಆಯ್ಕೆಮಾಡಿದೆ. ಶಿವಕೊಟ್ಯಾಚಾರ್ಯರ ವಡ್ಡಾರಾಧನೆಯ ‘ಚಾಣಕ್ಯರಿಸಿಯ ಕಥೆ’ಯನ್ನು ಇಲ್ಲಿ ಪಠ್ಯಕ್ಕಾಗಿ ಆಯ್ಕೆ ಮಾಡಿದೆ. ನಿರಂತರ ಪರಿಶ್ರಮ, ಸಾಹಸ, ಛಲ, ನಿಷ್ಠೆ, ಮತ್ತು ಚತುರತೆಯಿಂದ ಏನನ್ನಾದರೂ ಸಾಧಿಸಬಹುದು ಎನ್ನುವುದು ಈ ಪಠ್ಯಭಾಗದ ಆಶಯ. ಆದಿಕವಿ ಪಂಪನು ಬರೆದ ಆದಿಪುರಾಣದಲ್ಲಿನ ಭರತ ಬಾಹುಬಲಿಯರ ಪ್ರಸಂಗವನ್ನು ‘ತಪಶ್ಚರಣ ನಿಶ್ಚಳನಿಶ್ಚಯ ಮನನಾದಾಗಳ್’ ಶೀರ್ಷಿಕೆಯಲ್ಲಿ ಸಂಗ್ರಹಿಸಿದೆ. ಈ ಕಾವ್ಯಭಾಗವು ಶಾಂತಿ, ಸಹನೆಯ ಸಂದೇಶಗಳನ್ನು ಸಾರುತ್ತದೆ. ಕವಿರನ್ನನು ಬರೆದ ಗದಾಯುದ್ಧದಲ್ಲಿನ ಭೀಮಸೇನಡಂಬರಂ ಪ್ರಸಂಗವನ್ನು ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಶೀರ್ಷಿಕೆಯಡಿ ಸಂಗ್ರಹಿಸಿದೆ. ಮನುಷ್ಯನ ಮನಸ್ಸಿನಲ್ಲಿ ಅಡಗಿದ ದ್ವೇಷ, ಮತ್ಸರ, ಸ್ವಾರ್ಥ, ಹಠ, ಪ್ರತಿಷ್ಠೆ, ಅಧಿಕಾರದ ಮದಗಳೆಲ್ಲವೂ ಅಧಃಪತನಕ್ಕೆ ಈಡು ಮಾಡುತ್ತವೆ. ನಾಗವರ್ಮನ ಕರ್ನಾಟಕ ಕಾದಂಬರಿಯಲ್ಲಿನ ಮಹಾಶ್ವೇತೆಯ ಪ್ರಸಂಗವು ‘ಕಾಂತೆ ಕಣ್ಗೆಸೆದಿರ್ದಳ್’ ಶೀರ್ಷಿಕೆಯಲ್ಲಿ ಸಂಗ್ರಹಿಸಿದೆ. ದುರ್ಗಸಿಂಹನ ಪಂಚತಂತ್ರ ಕೃತಿಯಲ್ಲಿನ ‘ಮಿತೃತ್ವಮಂ ಕೈಕೊಳ್ವುದುಚಿತಮ್’ ಎನ್ನುವ ಭಾಗವನ್ನೂ ಪಠ್ಯಕ್ಕೆ ಆಯ್ಕೆ ಮಾಡಿಕೊಂಡಿದೆ. ನಾಗಚಂದ್ರನು ಬರೆದ ಪಂಪ ರಾಮಾಯಣದಲ್ಲಿನ ಸೀತಾಪಹರಣ ಪ್ರಸಂಗವನ್ನು ‘ಪ¿ ಗಂ ಪಾಪಕ್ಕಮಂಜದವರೇಗೆಯ್ಯರ್’ ಶೀರ್ಷಿಕೆಯಲ್ಲಿ ಸಂಗ್ರಹಿಸಲಾಗಿದೆ. ಮನುಷ್ಯರ ಗುಣಸ್ವಭಾವಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅವಲೋಕಿಸಲು ಆಸ್ಪದ ಕೊಡುವಂತಿರುವ ಇಲ್ಲಿನ ಕಾವ್ಯಭಾಗವು ಓದುಗರ ಮನಸೂರೆಗೊಳ್ಳುತ್ತದೆ. ಒಟ್ಟಿನಲ್ಲಿ ಸ್ನಾತಕೋತ್ತರ ಕನ್ನಡ ವಿದ್ಯಾರ್ಥಿಗಳ ಮನೋಸ್ಥಿತಿಯನ್ನು ಅರಿತು, ಅವರಲ್ಲಿ ಅಧ್ಯಯನದ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಮತ್ತು ಅವರಿಗೆ ಮಾನವೀಯ ಮೌಲ್ಯಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಈ ಪಠ್ಯಕೃತಿಯು ಪ್ರೇರಣೆ ನೀಡುತ್ತದೆ.
©2024 Book Brahma Private Limited.