‘ಪಶ್ಚಿಮಾಯನ’ ಪ್ರಮುಖ ಶೀರ್ಷಿಕೆಯ ಹಾಗೂ ವಸಾಹತು ಹಿಸ್ಟರಿ ಮತ್ತು ಕನ್ನಡ ಜಗತ್ತು ಉಪಶೀರ್ಷಿಕೆಯ ಈ ಕೃತಿಯು ರಾಜಾರಾಮ ಹೆಗಡೆ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯು 10 ಅನುಕ್ರಮಗಳನ್ನು ಒಳಗೊಂಡಿದೆ. ಸಂಪ್ರದಾಯದಿಂದ ಹಿಸ್ಟರಿಗೆ : ರಾಜಾವಳೀ ಕಥಾಸಾರದ ಸ್ವರೂಪದ ಕುರಿತು, ಆಧುನಿಕ ಜಾತಿ ಮೀಮಾಂಸೆ ಮತ್ತು ಮಹಾಭಾರತದ ಸಂವಾದಗಳು, ದೇಶೀ ಮತ್ತು ಶಿಷ್ಟ ಸಂಸ್ಕೃತಿ: ನಿಜ ಚಹರೆಗಳು, ಭಕ್ತಿ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ, ಗುಹೇಶ್ವರನೆಂಬ ಮಹಾಘನದ ನಿಜವನರಿಯದ ಕಾರಣ,(ವಚನಗಳಲ್ಲಿ ವೇದಗಳ ಟೀಕೆಯ ಪ್ರಸ್ತುತತೆ), ಅಲ್ಲಮಪ್ರಭುಗಳ ತಾತ್ವಿಕತೆ: ಜ್ಞಾನ ಮತ್ತು ಭಕ್ತಿ ಮಾರ್ಗಗಳ ನಡುವಿನ ಅನುಸಂಧಾನಗಳು, ಸಾಂಸ್ಕೃತಿಕ ಹಿಸ್ಟರಿಯ ಸ್ವೀಕೃತ ಚೌಕಟ್ಟುಗಳು, ಜೈನ ಸಾಹಿತ್ಯ: ಸಾಂಸ್ಕೃತಿಕ ಪ್ರಶ್ನೆಗಳು, ಕುವೆಂಪು ‘ನೆನಪಿನ ದೋಣಿಯಲ್ಲಿ’ ಜಾತಿ ವ್ಯವಸ್ಥೆಯ ಕುರಿತ ಅಭಿಜಾತ (ಕ್ಲಾಸಿಕಲ್) ನಿರೂಪಣೆಯ ಚೌಕಟ್ಟು, ಕುವೆಂಪು ಅವರ ವಿಶ್ವಮಾನವತ್ವ ಕಲ್ಪನೆಯ ಮೂಲಸೆಲೆಗಳನ್ನು ಒಳಗೊಂಡಿದೆ. ಈ ಲೇಖನಗಳು ಭಾರತೀಯ ಸಂಸ್ಕೃತಿಯ ಕುರಿತು ಇದುವರೆಗೆ ಚಾಲ್ತಿಯಲ್ಲಿರುವ ವಿಭಿನ್ನ ವಿಚಾರಗಳನ್ನು ಮರುಪರಿಶೀಲನೆಗೆ ಒಡ್ಡಿ, ಅವುಗಳನ್ನು ಹೊಸ ದೃಷ್ಟಿಕೋನದಿಂದ ಮರುನಿರೂಪಿಸುವ ಪ್ರಯತ್ನಗಳಾಗಿವೆ. ಭಾರತೀಯ ಸಂಸ್ಕೃತಿಯ ಕುರಿತು ಇಂದು ಪ್ರಚಲಿತದಲ್ಲಿರುವ ನಿರೂಪಣೆಗಳ ಬೇರು ವಸಾಹತು ಯುಗದವರೆಗೂ ಚಾಚಿದೆ. ವಸಾಹತು ಯುಗದಲ್ಲಿ ಪಾಶ್ಚಾತ್ಯರು ಮೊತ್ತಮೊದಲ ಬಾರಿ ಭಾರತೀಯ ಸಂಸ್ಕೃತಿ ಅಧ್ಯಯನವನ್ನು ಪ್ರಾರಂಭಿಸಿದರಷ್ಟೇ ಅಲ್ಲ; ಭಾರತೀಯರಿಗೆ ತಮ್ಮ ಸಂಸ್ಕೃತಿಯ ಬಗೆಗೆ ಹೇಗೆ ಯೋಚಿಸಬೇಕೆಂಬುದನ್ನೂ ಕಲಿಸಿದರು. ತದನಂತರ ಇಂಥ ನಿರೂಪಣೆಗಳೇ ಭಾರತೀಯ ಸಂಸ್ಕೃತಿಯ ಕುರಿತ ಸತ್ಯಗಳಾಗಿ ವಿದ್ಯಾವಂತರ ಮನದೊಳಗೆ ಸ್ಥಾನ ಪಡೆದವು. ಈ ನಿರೂಪಣೆಗಳ ಸಮಸ್ಯೆಗಳನ್ನು ಗುರುತಿಸುವ ಕೆಲಸ ಕಳೆದ ಐವತ್ತು ವರ್ಷಗಳಿಂದೀಚೆಗೆ ನಡೆದಿದೆ. ವಸಾಹತೋತ್ತರ ಚಿಂತನೆಗಳು ಆ ಕೆಲಸವನ್ನು ಪ್ರಾರಂಭಿಸುತ್ತವೆ. ಆದರೆ ಕಳೆದೆರಡು ದಶಕಗಳಲ್ಲಿ ಪ್ರೊ. ಬಾಲಗಂಗಾಧರ ಅವರು ತಮ್ಮ ಸಂಶೋಧನಾ ತಂಡದ ಜೊತೆಗೆ ಭಾರತೀಯ ಸಂಸ್ಕೃತಿಯ ಕುರಿತು ಕೆಲವು ಸಮರ್ಥವಾದ ಊಹಾಸಿದ್ಧಾಂತಗಳನ್ನು ರೂಪಿಸುತ್ತ ವಸಾಹತು ನಿರೂಪಣೆಗಳ ಮಿತಿಯಿಂದ ಹೊರಬರುವ ಸಾಧ್ಯತೆಯನ್ನು ಶೋಧಿಸತೊಡಗಿದ್ದಾರೆ. ಆ ಸಿದ್ಧಾಂತಗಳು ಭಾರತೀಯ ಸಂಸ್ಕೃತಿಯ ಅಧ್ಯಯನಗಳಲ್ಲಿ ಇರುವ ಮಿತಿಗಳನ್ನು ಸ್ಪಷ್ಟಗೊಳಿಸಿವೆ. ಭಾರತೀಯ ಸಂಸ್ಕೃತಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ತೆರೆದಿವೆ. ನಮ್ಮ ಸಂಸ್ಕೃತಿಯ ಕುರಿತ ಹಲವು ವಿವಾದಗಳನ್ನು ಬಗೆಹರಿಸುವ, ಪ್ರಶ್ನೆಗಳಿಗೆ ಉತ್ತರಿಸುವ ಮಾರ್ಗಗಳನ್ನು ತೆರೆದಿವೆ. ಪ್ರಸ್ತುತ ಲೇಖನಗಳು ಈ ಹಿನ್ನೆಲೆಯಿಂದ ಮೂಡಿಬಂದಿವೆ. ಭಾರತೀಯ ಸಂಸ್ಕೃತಿಯ ಕುರಿತ ಬೇರೆ ಬೇರೆ ಚರ್ಚೆಗಳಿಗೆ ಮುಖಾಮುಖಿಯಾಗುತ್ತ ಈ ಹೊಸ ಊಹಾ ಸಿದ್ಧಾಂತಗಳ ಮೂಲಕ ಅವನ್ನು ಅರ್ಥೈಸುವ ಪ್ರಯತ್ನವನ್ನು ಈ ಲೇಖನಗಳಲ್ಲಿ ಕಾಣಬಹುದು. ಇಲ್ಲಿನ ಲೇಖನಗಳಲ್ಲಿ 'ಅಲ್ಲಮ ಪ್ರಭುಗಳ ತಾತ್ವಿಕೆ.....' ಒಂದನ್ನು ಬಿಟ್ಟು ಉಳಿದೆಲ್ಲವೂ ಈಗಾಗಲೇ ಬೇರೆ ಬೇರೆ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಈ ಲೇಖನಗಳು ಭಾರತೀಯ ಸಂಸ್ಕೃತಿಯ ಕುರಿತು ವಸಾಹತು ಹಿಸ್ಟರಿಯು ಕಟ್ಟಿಕೊಟ್ಟ ಚಿತ್ರಣಗಳು ಯಾವ ರೀತಿಯಲ್ಲಿ ನಮ್ಮ ಗ್ರಹಿಕೆಯೊಳಗೆ ಬೇರು ಬಿಟ್ಟಿವೆ ಎಂಬುದನ್ನು ವಿಭಿನ್ನ ಉದಾಹರಣೆಗಳ ಮೂಲಕ ನಿದರ್ಶಿಸುತ್ತವೆ.
©2024 Book Brahma Private Limited.