ಇತ್ತೀಚಿನ ದಿನಗಳಲ್ಲಿ ಬರಹಗಾರರಿಗೆ ಬುದ್ದ ಪದೇ ಪದೇ ವಸ್ತುವಾಗುತ್ತಾನೆ. ವರ್ತಮಾನದ ದುರಂತಗಳನ್ನು ಬಿಡಿಸಿಡುವ ಸಂದರ್ಭದಲ್ಲಿ ಬುದ್ದ ನಮಗೆ ಕೈಮರವಾಗುತ್ತಾನೆ. ಇದೇ ಸಂದರ್ಭದಲ್ಲಿ ಜಾಗೃತ ದಲಿತ ಸಮುದಾಯವಂತೂ ಬುದ್ಧನಲ್ಲೇ ನಮ್ಮ ಬಿಡುಗಡೆ ಇದೆ ಎಂದು ದೃಢವಾಗಿ ನಂಬಿದೆ. ಈ ಹಿನ್ನೆಲೆಯಲ್ಲಿ ಬುದ್ಧ ಚಿಂತನೆ ಬೇರೆ ಬೇರೆ ರೂಪಗಳಲ್ಲಿ ಜನರ ನಡುವೆ ಸಂವಾದಿಸುತ್ತಿದೆ. ಇದೇ ಹೊತ್ತಿನಲ್ಲಿ ಬುದ್ಧನನ್ನು ಅವನ ತತ್ವವನ್ನು ಸರಳವಾಗಿ ಶ್ರೀಸಾಮಾನ್ಯನಿಗೆ ಹೇಗೆ ತಲುಪಿಸಬಹುದು ಎನ್ನುವುದು ಕೂಡ ಲೇಖಕರ ಪಾಲಿನ ಸವಲಾಗಿ ಪರಿಣಮಿಸಿದೆ. ಅಕ್ಷರದಿಂದ ತುಂಬಾ ದೂರದಲ್ಲಿರುವ, ಶೋಷಿತ ಜನಸಮುದಾಯಕ್ಕೆ ಬುದ್ದನ ಜಟಿಲ ಚಿಂತನೆಯನ್ನು ಸರಳ ರೂಪಕ್ಕಿಳಿಸುವುದು ಇಂದಿನ ಅಗತ್ಯ. ಇಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಗೌತಮನ ಸಾಧನೆಯ ಹಾದಿ, ತಿಳಿವಿನ ಮಾರ್ಗದಲ್ಲಿ ಅವನಿಗಾದ ಅನುಭವ ಸಾಮಾನ್ಯನಂತೆಯೇ ಇದ್ದ ಸಿದ್ದಾರ್ಥ ಹೊಸ ಆಲೋಚನೆಗಳನ್ನು ರೂಢಿಸಿಕೊಳ್ಳುತ್ತಾ ಎಡವುತ್ತಾ, ಬೀಳುತ್ತಾ, ಏಳುತ್ತಾ ನಡೆದು ಕಂಡುಕೊಂಡ ಧ್ಯಾನ, ವಿಪಶ್ಯನ, ಆ ಮೂಲಕ ಪಡೆದ ಜ್ಞಾನೋದಯದ ವಿನ್ಯಾಸವನ್ನು, ಅವನ ತರ್ಕವಿಧಾನ, ಸಂಸ್ಕಾರ ಕ್ರಮ, ಆರ್ಯಸತ್ಯ, ಶೀಲ ಮುಂತಾದವುಗಳ ತಾಂತ್ರಿಕ ವಿವರಗಳನ್ನು ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.