ಪ್ರೊ. ಎಂ.ಎಂ. ಕಲಬುರ್ಗಿ ಅವರು ಕನ್ನಡ ಪ್ರಾಧ್ಯಾಪಕರಾಗಿ, ಹಿರಿಯ ಸಂಶೋಧಕರಾಗಿ, ಶಾಸನ ತಜ್ಞರಾಗಿ ಮತ್ತು ವಚನ ಸಾಹಿತ್ಯ ಕುರಿತು ಸಂಶೋಧನೆ ಮಾಡಿದ ದೊಡ್ಡ ವಿದ್ವಾಂಸರು. ಕಳೆದ 25 ವರ್ಷಗಳಿಂದ ಡಾ. ಕಲಬುರ್ಗಿಯವರ ಕುರಿತು ಆತ್ಮೀಯ ಅಭಿಮಾನ ಇಟ್ಟುಕೊಂಡಿದ್ದ ಲೇಖಕ ಕಲ್ಯಾಣರಾವ ಪಾಟೀಲರು, ಡಾ. ಕಲಬುರ್ಗಿಯವರು (30-08-2015) ಧಾರವಾಡದಲ್ಲಿ ಹತ್ಯೆಯಾದ ಕೂಡಲೇ ಆ ಹುತಾತ್ಮರಿಗೆ ಸಲ್ಲಿಸುವ ನುಡಿನಮನ ಎಂಬಂತೆ ಒಂದು ತಿಂಗಳ ಅವಧಿಯಲ್ಲಿಯೇ ಈ ಹೊತ್ತಿಗೆಯನ್ನು ಸಿದ್ಧಪಡಿಸಿ ಪ್ರಕಟಿಸಿದರು. ಹೊಸಗನ್ನಡ ಸಾಹಿತ್ಯದ ಪ್ರಾರಂಭಿಕ ಘಟ್ಟದಲ್ಲಿದ್ದ ವಿದ್ವಾಂಸರ ಕೊಡುಗೆಯನ್ನುಕೃತಿಯಲ್ಲಿ ಸ್ಮರಿಸಲಾಗಿದೆ. ನಂತರ ಕಲಬುರ್ಗಿಯವರ ಜೀವನದ ಪ್ರಮುಖ ಹೆಜ್ಜೆ ಗುರುತುಗಳನ್ನು ಹಿಡಿದಿಡಲಾಗಿದೆ. ಅವರು ಮಾಡಿದ ಶೋಧ ಸಾಧನೆಗಳ ಬಗೆಗೂ ದೀರ್ಘವಾಗಿ ಪರಿಶೀಲಿಸಲಾಗಿದೆ. ಅವರ ಬಗೆಗೆ ವಿವಿಧ ಸಂವಹನ ಮಾಧ್ಯಮಗಳಲ್ಲಿ ಬಂದಿರುವ ಶ್ರದ್ಧಾಂಜಲಿ/ನುಡಿನಮನದ ಸಹೃದಯ ಸ್ಪಂದನದ ಮಾತುಗಳನ್ನು ಸಂಗ್ರಹಿಸಲಾಗಿದೆ. ಕಲಬುರ್ಗಿಯವರ ಸಾಹಿತ್ಯಕ ವ್ಯಕ್ತಿತ್ವ ಮತ್ತು ಮಹತ್ವವನ್ನು ಸಮಾರೋಪದಲ್ಲಿ ವಿವರಿಸಲಾಗಿದೆ. ಅನುಬಂಧಗಳಲ್ಲಿ ಕಲಬುರ್ಗಿಯವರ ಜೀವನ ವಿವರ, ಕೃತಿ ವಿವರ, ಶರಣ ಸಾಹಿತ್ಯ ಶೋಧಗಳು, ಜೀವನ ಸಮನ್ವಯ ವಚನೋಕ್ತಿಗಳು, ಶೋಧ-ಸೂಕ್ತಿ ಸುಧಾರ್ಣವ ಶೀರ್ಷಿಕೆಯಲ್ಲಿ ಕಲಬುರ್ಗಿಯವರ ಶೋಧನೋಕ್ತಿಗಳನ್ನು ಸಂಗ್ರಹಿಸಲಾಗಿದೆ. ಕಲಬುರ್ಗಿಯವರ ನಿಧನಾನಂತರ ಪ್ರಕಟವಾಗಿರುವ ಅನೇಕ ಕೃತಿಗಳಲ್ಲಿ ಈ ಹೊತ್ತಿಗೆಯಲ್ಲಿನ ಅನುಬಂಧಗಳ ವಿವರಗಳನ್ನೇ ಅನೇಕರು ಬಳಸಿಕೊಂಡಿರುವುದು ಲೇಖಕರ ವ್ಯವಸ್ಥಿತ ದಾಖಲಾತಿಗೆ ನಿದರ್ಶನವಾಗಿದೆ. ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ನಂತರದ ಒಂದೇ ತಿಂಗಳಲ್ಲಿ ಅವರ ಬಗೆಗೆ ಸಂಕ್ಷಿಪ್ತವಾದರೂ ಸಂಪೂರ್ಣ ಮಾಹಿತಿ ಕೊಡುವ ಈ ಹೊತ್ತಿಗೆಯನ್ನು ಸಿದ್ಧಪಡಿಸಿದ ಲೇಖಕರ ಪರಿಶ್ರಮ ಪ್ರಶಂಸಾರ್ಹ.
©2024 Book Brahma Private Limited.