‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಭಾಗ-2 ಕೃತಿಯು ಜಿ. ಎನ್. ಉಪಾಧ್ಯ ಅವರ ಸಂಪಾದಕತ್ವದ ಮುಂಬೈ ಸಾಹಿತ್ಯ ಚರಿತ್ರೆಯ ಕುರಿತ ಬರವಣಿಗೆಯ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಜನಾರ್ಧನ ಭಟ್ ‘ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ ಅಭಿಮಾನ ಪಟ್ಟಿದ್ದೇನೆ. ನನ್ನ ಗ್ರಹಿಕೆಯ ಪ್ರಕಾರ, ಮುಂಬಯಿಯ ಕನ್ನಡ ಸಾಹಿತ್ಯ ಕ್ಷೇತ್ರ ಒಂದು ಪ್ರತ್ಯೇಕ ಅಸ್ಮಿತೆ ಉಳ್ಳದ್ದು. ಇಂಗ್ಲಿಷ್ ಸಾಹಿತ್ಯ ಅಂದರೆ, ಇಂಗ್ಲೆಂಡಿನಲ್ಲಿ ಬರೆದದ್ದು ಮಾತ್ರ ಅಲ್ಲ ಹೇಗೆಯೋ ಹಾಗೆಯೇ ಕನ್ನಡ ಸಾಹಿತ್ಯ ಅನ್ನುವುದು ಕರ್ನಾಟಕದೊಳಗಿನ ಸಾಹಿತ್ಯ ಮಾತ್ರವಲ್ಲ, ಮುಂಬಯಿ ಕನ್ನಡ ಸಾಹಿತ್ಯವೂ ಸೇರಿದ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯವನ್ನು ಕಲಿಯುವವರು ಆಮೇರಿಕದ (ಇಂಗ್ಲಿಷ್) ಸಾಹಿತ್ಯವನ್ನು ಒಂದು ಪ್ರತ್ಯೇಕ ಪತ್ರಿಕೆಯಾಗಿ ಕಲಿಯುತ್ತಾರೆ. ಹಾಗೆಯೇ, ಕಾಮನ್‌ವೆಲ್ತ್ ಇಂಗ್ಲಿಷ್ ಸಾಹಿತ್ಯ, ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್ ಎಂಬ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಾರೆ. ಹಾಗೆಯೇ, ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಹೊರನಾಡ ಕನ್ನಡ ಸಾಹಿತ್ಯ ಎಂಬ ಪತ್ರಿಕೆಯನ್ನು ಇಟ್ಟರೆ ಅದರ ಬಹುಪಾಲು ಮುಂಬಯಿ ಕನ್ನಡ ಸಾಹಿತಿಗಳ ಬರಹಗಳೇ ಆಗಿರುತ್ತವೆ. (ಚೆನ್ನೈಯ ಕೊಡುಗೆ ಹಿಂದೆ ಸಾಕಷ್ಟಿದ್ದರೂ, ಅಲ್ಲಿ ಮುಂಬಯಿಯಲ್ಲಿರುವಂತೆ ಒಂದು ಪರಂಪರೆಯಿಲ್ಲ. ಕಾಸರಗೋಡಿನಲ್ಲಿ ಸಣ್ಣಮಟ್ಟಿಗೆ ಇದೆ). ಜೀವಂತ ಸಾಹಿತ್ಯ ಮುಂಬಯಿ ಸಾಹಿತ್ಯ ಇನ್ನು ಮುಂದೆ ಸ್ವಲ್ಪ ಕಠಿಣವಾದ ವಿಮರ್ಶೆಯ ಪರೀಕ್ಷೆಯನ್ನು ಎದುರಿಸಿ ವಿಶ್ವಮಾನ್ಯವಾಗುವ ಕಡೆಗೆ ಸಾಗಬೇಕಾಗಿದೆ. ಡಾ. ಜಿ. ಎನ್. ಉಪಾಧ್ಯರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಈ ಕೆಲಸವನ್ನು ಮಾಡುತ್ತಿರುವುದನ್ನು (ಉದಾಹರಣೆಗೆ ಕವಿಗಳು ಓದಿದ ಕವಿತೆಗಳ ನಿರ್ದಾಕ್ಷಿಣ್ಯ ಮೌಲ್ಯಮಾಪನ) ನಾನು ಗಮನಿಸಿದ್ದೇನೆ. ಇತರ ಸಮೀಕ್ಷಕರೂ ಆ ನಿಟ್ಟಿನಲ್ಲಿ ಸರಿಯಾದ ಮೌಲ್ಯಮಾಪನಕ್ಕೆ ಮುಂದಾಗಬೇಕು. ಯುವ ಸಾಹಿತಿಗಳು ತಮ್ಮ ಬರವಣಿಗೆಗೆ ಶ್ಲಾಘನೆಯನ್ನಷ್ಟೆ ಬಯಸದೆ, ವಿಮರ್ಶೆಯ ಅಗ್ನಿಪರೀಕ್ಷೆಯನ್ನು ಹಾದು ಬರುವ ಎದೆಗಾರಿಕೆಯನ್ನು ತೋರಬೇಕು. ಈಗಿನ ಯುವ ಸಾಹಿತಿಗಳ ಬರವಣಿಗೆ ಕರ್ನಾಟಕದೊಳಗಿನ ಪತ್ರಿಕೆಗಳಲ್ಲಿಯೂ ಹೊಸ ಉತ್ಸಾಹವನ್ನು ಹುಟ್ಟಿಸಿದೆ ಎಂದರೆ ಅವರ ಬರವಣಿಗೆಯ ಸತ್ವ ಅರ್ಥವಾದೀತು. ಅದನ್ನು ಸರಿಯಾಗಿ ಗ್ರಹಿಸುವ ಅಧ್ಯಯನ ನಡೆಯಬೇಕು. ಈ ಬಗೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕೆಲವು ಸಂಶೋಧನೆಗಳು ನಡೆದಿವೆ. ಡಾ. ಜಿ. ಎನ್, ಉಪಾಧ್ಯರ 'ಮುಂಬೈ ಕನ್ನಡ ಜಗತ್ತು' ಎಂಬ ಬಿಡಿ ಲೇಖನಗಳ ವ್ಯವಸ್ಥಿತ ಜೋಡಣೆಯ ಸಂಕಲವಿದೆ. ಇವನ್ನೆಲ್ಲ ಗಮನಿಸಿಕೊಂಡು ಮುಂಬಯಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಕೆಲಸ ಆಗಬೇಕು. ಅದರಿಂದಾಗಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅದನ್ನೊಂದು ಪತ್ರಿಕೆಯಾಗಿ ಅಭ್ಯಾಸ ಮಾಡುವುದಕ್ಕೆ ಅನುಕೂಲವಾದೀತು’ ಎಂದಿದ್ದಾರೆ.
©2024 Book Brahma Private Limited.