`ಲೂಸಿ ಸಾಲ್ಡಾನಾ ಗುರುಮಾತೆಯ ಬದುಕು ಬರಹ' ಲೇಖಕ ವೈ.ಬಿ. ಕಡಕೋಳ ಅವರ ಸಂಪಾದಿತ ಕೃತಿ. ಕತೆಯಲ್ಲ ಜೀವನ, ಅಮೃತಧಾರೆ, ಒಂಟಿ ಪಯಣ, ಮನೆಮದ್ದು, ಅಡಿಗೆ ವೈವಿಧ್ಯ, ಇದೇ ಲೇಖಕರ ಈ ಐದು ಕೃತಿಗಳನ್ನು ಒಂದಡೆ ಸಂಕಲಿಸಿದ್ದೇ ಈ ಕೃತಿ. ಸಾಹಿತಿ ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ ಅವರು ಕೃತಿಗೆ ಮುನ್ನುಡಿ ಬರೆದು ‘ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನವರಾದ ಲೂಸಿ ಸಾಲ್ಡಾನಾ ಗುರುಮಾತೆಯವರ ಬದುಕು-ಬರಹದ ಸಾಧನೆಯ ಚಿತ್ರಣವನ್ನು ಒಳಗೊಂಡಿದೆ. ಇವರ ಬದುಕಿನ ಚಿತ್ತಾರಗಳನ್ನು ಗಮನಿಸಿದಾಗ ನನಗೆ ಜನಪದ ಸಾಹಿತ್ಯದಲ್ಲಿ ಬರುವ ‘ಕೆರೆಗೆಹಾರ’ ಕಥೆಯ ಭಾಗೀರಥಿ ಪಾತ್ರ ಕಣ್ಮುಂದೆ ಕುಣಿದಾಡಿದಂತಾಗುತ್ತದೆ ಎನಿಸುತ್ತದೆ. ಗುರುಮಾತೆಯು, ಪತಿಯನ್ನು ಸಾವಿಲ್ಲದ ಕೇಡಿಲ್ಲದ ಭಾವ ಭಕ್ತಿಯಲ್ಲಿ ಆರಾಧಿಸಿ; ಮಕ್ಕಳಿಲ್ಲದಿದ್ದರೂ ಕಲಿಸುವ ಶಾಲೆಯ ಮಕ್ಕಳನ್ನು ತನ್ನ ಮಕ್ಕಳೆಂದು ಸಮತೂಕದ ನೆಲೆಯಲ್ಲಿ ಬದುಕು ಸವಿಸಿ, ‘ಶಿಕ್ಷಕ’ ಪವಿತ್ರ ಕಾಯಕಕ್ಕೆ ಕೈಲಾಸದ ಕಲ್ಪನೆ ತಂದವರು. ‘ಅಮೃತಧಾರೆ’ ಯಲ್ಲಿ ಲೂಸಿ ಸಾಲ್ಡಾನಾ ಅವರು ಸಂಗ್ರಹಿಸಿದ ನೂರಾರು ನುಡಿ ಮುತ್ತುಗಳು ಅಳವಟ್ಟಿವೆ. ‘ಒಂಟಿಪಯಣ’ ಇದು ಇವರು ರಚಿಸಿದ ಕವನ ಸಂಕಲನ. ಇಲ್ಲಿ ಐವತ್ತು ಕವಿತೆಗಳು ಸುಂದರವಾಗಿ ಅನಾವರಣಗೊಂಡಿವೆ. ನಾಲ್ಕನೆಯ ಭಾಗ ‘ಮನೆಮದ್ದು’ ಇಲ್ಲಿ ವನಸ್ಪತಿ ನೆಲೆಯಲ್ಲಿ; ಕೈಗೆ ಸಿಗುವ ವಸ್ತುಗಳಿಂದ ಆರೋಗ್ಯ ಸರಿಪಡಿಸಿಕೊಳ್ಳು ವಿಧಾನವನ್ನು ಹನ್ನೆರಡು ಉಪ ಅಧ್ಯಾಯಗಳಲ್ಲಿ ನಿರೂಪಿಸಿದ್ದಾರೆ. ಕೃತಿಯ ಕೊನೆಯ ಭಾಗ ‘ಅಡುಗೆವೈವಿಧ್ಯ’ ಇಲ್ಲಿ ವಿವಿಧ ತರದ ಅಡುಗೆ ವಿಧಾನಗಳನ್ನು ಚಂದದಿಂದ ಹೇಳಿದ್ದಾರೆ. ಕೃತಿಯ ಕೊನೆಯಲ್ಲಿ ಲೂಸಿಸಾಲ್ಡಾನಾ ಅವರು ಸರಕಾರಿ ಶಾಲೆಗೆ ಲಕ್ಷ ಲಕ್ಷ ಹಣ ದತ್ತಿ ನೀಡಿದ ವಿವರವನ್ನು ಎಲ್.ಐ.ಲಕ್ಕಮ್ಮನವರು ಇಲ್ಲಿ ಜೋಡಿಸಿರುವರು. ಸಂಪಾದಕರ ಪರಿಚಯವನ್ನು ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ ಅವರು ‘ವಜ್ರದ ಹರಳು’ ಕೃತಿಗೆ ಬರೆದ ಲೇಖನವಿದೆ. ಲೂಸಿ ಸಾಲ್ಡಾನಾ ಅವರ ಹೋರಾಟದ ಬದುಕಿನ ಮಜಲುಗಳನ್ನು ಶ್ರಮ ಸಂಸ್ಕೃತಿ ಎಳೆಗಳನ್ನು ನಾಡಿಗೆ ಪರಿಚಯಿಸುವುದು ಅರ್ಥಪೂರ್ಣ’ 'ಕತೆಯಲ್ಲ ಜೀವನ' ಕೃತಿಯನ್ನು ನವರಸ ವೇದಿಕೆ ಸ್ನೇಹಿತರ ಬಳಗದ ಮೂಲಕ ಬಾಬಾಜಾನ್ ಮುಲ್ಲಾ ಕಥೆ ಚಿತ್ರ ಕಥೆ ಬರೆದು ನಿರ್ದೇಶನ ಮಾಡುವ ಮೂಲಕ "ಬದುಕು ಬಂಡಿ" ಚಲನಚಿತ್ರ ವಾಗಿಸಿದ್ದು. ನಂದಕುಮಾರ್ ದ್ಯಾಂಪುರ ಸಹ ನಿರ್ದೇಶಕ ರಾಗಿದ್ದು, ಶೀಘ್ರವೇ ಬಿಡುಗಡೆಗೊಳ್ಳಲಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.