‘ಇಸ್ಲಾಂಧರ್ಮ ಸಂದೇಶ’ ಕೃತಿಯ ಮೂಲ ಲೇಖಕ ವಿನೋಬಾ. ಕಾಲಿಂದೀ ಅವರು ಈ ಕೃತಿಯನ್ನು ಸಂಪಾದಿಸಿದ್ದು, ಸಿದ್ಧರಾಮ ಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಿನೋಬಾ ಅವರಿಗೆ 'ಕುರಾನ'ದ ಬಗೆಗಿರುವ ಗ್ರಹಿಕೆಯು ನಿಸ್ಸಂದೇಹವಾಗಿ ಸರಿಯಾದುದೆಂದು ನಾನು ಹೇಳಲೇಬೇಕು. ಹಿಂದುಧರ್ಮ ಮತ್ತು ಇಸ್ಲಾಂಧರ್ಮವನ್ನು ಕುರಿತು ಈ ಗ್ರಂಥದ ಅನೇಕ ಕಡೆಗಳಲ್ಲಿ ಮಾಡಿರುವ ಹೋಲಿಕೆಯು ಅತ್ಯಂತ ಪ್ರಾಮಾಣಿಕವಾಗಿದ್ದು, ದಾರಾ ಶಿಕೋಡನು ತನ್ನ 'ಮಜಮಾ-ಅಲ್ ಬಹ್ರೈನ' (ಎರಡು ಮಹಾಸಾಗರಗಳ ಮಿಲನ-ಇಸ್ಲಾಂ ಮತ್ತು ಹಿಂದೂಧರ್ಮ)ದಲ್ಲಿ ಮಾಡಿದ ಹೋಲಿಕೆಯ ಮಟ್ಟದ್ದಾಗಿದೆ. ನನ್ನ ದೃಷ್ಟಿಯಲ್ಲಿ ಈ ಗ್ರಂಥವು ಹಿಂದೂ ಮತ್ತು ಮುಸಲ್ಮಾನರಲ್ಲಿ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ತಥಾಕಥಿತ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ಮಾಧ್ಯಮಗಳ ವಿಶ್ಲೇಷಕರು ಇಸ್ಲಾಂ ಹಾಗೂ ಹಿಂದುಧರ್ಮಗಳ ಬಗೆಗಿರುವ ಅತ್ಯಲ್ಪ ಜ್ಞಾನದ ಕಾರಣದಿಂದ ತಪ್ಪು ತಿಳಿವಳಿಕೆಗಳನ್ನು ಹಬ್ಬಿಸುತ್ತಿರುವ ಈ ದಿನಗಳಲ್ಲಿ ಇದು ಅತ್ಯವಶ್ಯವಾಗಿದೆ. ಮೌಲಾನಾ ಆಜಾದ್ ಅವರ ಹಾಗೆ ವಿನೋಬಾ, ಇಸ್ಲಾಂ ಮತ್ತು ಇತರ ಎಲ್ಲ ಧರ್ಮಗಳ ಮೂಲ ಆತ್ಮವನ್ನು ಗುರುತಿಸಿದ ವ್ಯಕ್ತಿ ಎಂಬುದು ನನ್ನ ನಂಬಿಕೆಯಾಗಿದೆ. ಇಸ್ಲಾಂದ ಸಮರ್ಥನೆ ಮತ್ತು ವಿರೋಧದಲ್ಲಿ ಸಾಕಷ್ಟು ಬರೆಯಲಾಗುತ್ತಿದ್ದರೂ ಅದು ಕೇವಲ ರಾಜಕೀಯ ಲಾಭಕ್ಕಾಗಿ. ಇದರಲ್ಲಿ ಧಾರ್ಮಿಕತೆ ಮಾಯವಾಗುತ್ತಿದೆ. ಆದ್ದರಿಂದ, ಇಸ್ಲಾಂ ಮತ್ತು ಹಿಂದೂ ಧರ್ಮಗಳ ಮೂಲ ಆತ್ಮವನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತ, ಧಾರ್ಮಿಕ ದರ್ಶನಗಳ ಆಧಾರದಲ್ಲಿ ಅವುಗಳನ್ನು ಪ್ರಸ್ತುತಪಡಿಸುವುದು ಅತ್ಯಂತ ಅವಶ್ಯವಾಗಿದೆ. ಸಂಘರ್ಷಗಳಿಂದ ನಲುಗಿ ಹೋಗಿರುವ ಈ ದೇಶಕ್ಕೆ ಇದು ಬಹುದೊಡ್ಡ ಸೇವೆಯಾಗುವುದು’ ಎಂದು ಅಭಿಪ್ರಾಯಪಡಲಾಗಿದೆ.
©2024 Book Brahma Private Limited.