ಲೇಖಕ ಜಿ.ವಿ. ಆನಂದಮೂರ್ತಿ ಅವರ ಕೃತಿ-ಬುದ್ಧನ ಕಥೆಗಳು. ಬುದ್ಧ ದೇವನು ತನ್ನ ಬೋಧನೆಯನ್ನು ಜನಸಾಮಾನ್ಯರಿಗೆ, ಬಿಕ್ಕುಗಳಿಗೆ ಸರಳವಾಗಿ ತಿಳಿಸಿದ ಕಥೆಗಳಾಗಿವೆ. ತನ್ನ ಕಣ್ಣೆದುರಿನ ಸಾಮಾನ್ಯ ಸಂಗತಿಗಳ ಮೂಲಕವೇ ಉನ್ನತವಾದ ಬದುಕಿನ ಚಿಂತನೆಗಳನ್ನು ಈ ಕಥೆಗಳು ನಮ್ಮ ಮುಂದಿಡುತ್ತವೆ. ತರ್ಕವಿಲ್ಲದ, ಅಲೌಕಿಕತೆ, ಅಧ್ಯಾತಿಕತೆ ಮುಂತಾದ ಸಂಕೀರ್ಣ ವಿಚಾರಗಳನ್ನು ಪ್ರಸ್ತಾಪಿಸದೆ, ಮನುಷ್ಯ ನಿಸರ್ಗವನ್ನು ಹಾಗೂ ತನ್ನ ಸಹಜೀವಿಗಳನ್ನು ನೋಯಿಸದೆ, ಸಂತಸದಿಂದ ಬದುಕುವುದು ಹೇಗೆಂದು ತಿಳಿಸುವ ಇಲ್ಲಿನ ಕಥೆಗಳು ಜಗತ್ತಿನ ಯಾವುದೇ ಸಮುದಾಯಕ್ಕೆ, ಯಾವುದೇ ಧರ್ಮದವರಿಗೆ, ಯಾವುದೇ ಭಾಷಿಕರಿಗೆ ಅನ್ವಯವಾಗುವಂತೆ ಹೊಂದಿಕೊಳ್ಳುತ್ತವೆ. ಇದೇ ಬುದ್ಧ ದೇವನು ಬೋಧಿಸಿದ ಕಥೆಗಳ ವೈಶಿಷ್ಟ್ಯತೆ ಇರುವುದು.
ಬುದ್ಧದೇವನ ಪ್ರವಚನವು ದೈನಂದಿನ ಭಾಷೆ ಮತ್ತು ಅನುಭವಕ್ಕೆ ಎಟಕುವ ವಿವರಗಳನ್ನು ಒಳಗೊಂಡು ಅತ್ಯಂತ ಸರಳವಾಗಿ ಮತ್ತು ಅಷ್ಟೇ ಗಾಂಭೀರ್ಯದಿಂದ ಭಾವುಕತೆಯಿಲ್ಲದೆ ಎಲ್ಲವನ್ನೂ ತಿಳಿಸುತ್ತವೆ. ಈ ಪ್ರವಚನಗಳೆಲ್ಲವನ್ನೂ ಬುದ್ಧದೇವ ತನ್ನ ಕಣ್ಣೆದುರಿನ ಸಮಾಜದಲ್ಲಿನ ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಹಸನುಗೊಳ್ಳಬೇಕಾದ ಮಾನವನ ವೈಯಕ್ತಿಕ ಬದುಕನ್ನು ಕುರಿತು ಬೋಧಿಸಿದ್ದು. ಇವೆಲ್ಲವೂ ಆಶ್ಚರ್ಯ ಹುಟ್ಟಿಸುವಷ್ಟು ಆಧುನಿಕವಾಗಿವೆ. ಧರ್ಮ, ಅಧ್ಯಾತ್ಮ, ಇಹ-ಪರಗಳೆಂಬ ಯಾವ ಅಮೂರ್ತ ವಿಚಾರಗಳ ಜಿಜ್ಞಾಸೆಯೂ ಇಲ್ಲದ ಇಲ್ಲಿನ ಕಥೆಗಳು ಓದುಗರೊಳಗೆ ಕರುಣೆ ಮತ್ತು ಮೈತ್ರಿಯ ಮಳೆಯನ್ನೇ ಸುರಿಸುತ್ತವೆ. ದ್ವೇಷ, ಈರ್ಷೆ, ಸ್ವಾರ್ಥ, ಹಿಂಸೆಗಳಲ್ಲೇ ಮುಳುಗಿರುವ ಮಾನವ ಜನಾಂಗ ಭವಿಷ್ಯದಲ್ಲಿ ನಡೆಯಬೇಕಾದ ಪಂಚಶೀಲ ಮಾರ್ಗವನ್ನು ತೋರುತ್ತವೆ. ಇದು ಇಲ್ಲಿಯ ಎಲ್ಲ ಕಥೆಗಳ ಹಂಬಲ.
©2024 Book Brahma Private Limited.