ಭಗವದ್ಗೀತೆಯ ಕುರಿತಂತೆ ರಾಜಕಾರಣಿಗಳು ಮಾತನಾಡಲು ಶುರು ಹಚ್ಚಿರುವ ಈ ದಿನಗಳಲ್ಲಿ ಭಗವದ್ಗೀತೆಯನ್ನು, ಅದರೊಳಗಿರುವ ತಾತ್ವಿಕ ಸಂಗತಿಗಳನ್ನು ನಿಜಕ್ಕೂ ಅರಿತವರ ಧ್ವನಿ ಕೇಳಿಸುತ್ತಿಲ್ಲ. ಬದಲಿಗೆ ಭಗವದ್ಗೀತೆಯ ಒಂದು ಸಾಲನ್ನೂ ಓದದ, ಅದನ್ನು ಅರ್ಥ ಮಾಡಿಕೊಳ್ಳದ ರಾಜಕಾರಣಿಗಳು ಬೀದಿ ಬದಿಯಲ್ಲಿ ನಿಂತು ಗದ್ದಲ ಎಬ್ಬಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖ್ಯಾತ ಚಿಂತಕ ಜಿ. ರಾಮಕೃಷ್ಣ ಅವರು “ಭಗವದ್ಗೀತೆ - ಒಂದು ಅವಲೋಕನ' ಕೃತಿಯನ್ನು ಹೊರತಂದಿದ್ದಾರೆ. ಇಲ್ಲಿ ಜಿ. ರಾಮಕೃಷ್ಣ ಅವರು ಅನಗತ್ಯವಾಗಿ ಭಗವದ್ಗೀತೆಯ ವಿಮರ್ಶೆಗೆ ಇಳಿದಿಲ್ಲ. ಅಥವಾ ಟೀಕೆಯೂ ಅವರ ಉದ್ದೇಶವಲ್ಲ. ಅವೆಲ್ಲದರ ಬದಲಿಗೆ, ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆಯೇನು ಎಂಬುದರತ್ತ ಓದುಗರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಒಂದೆಡೆ ಭಗವದ್ಗೀತೆ ಪರಮಶ್ರೇಷ್ಠ ಎಂದು ನಂಬುವವರಾದರೆ, ಇನ್ನೊಂದೆಡೆ ಭಗವದ್ಗೀತೆಯನ್ನು ಸಾರಾಸಗಟಾಗಿ ಬದಿಗೆ ತಳ್ಳುವವರ ನಡುವೆ, ರಾಮಕೃಷ್ಣ ವಿಚಾರ ಒಂದು ಭಿನ್ನ ದಿಕ್ಕನ್ನು ತೋರಿಸಿಕೊಡುತ್ತದೆ.
©2024 Book Brahma Private Limited.