ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಿಸಿದ ಕವನ ಸಂಕಲನ-ಅವ್ವ. ರಾಜ್ಯದ ವಿವಿಧೆಡೆ ಇರುವ ಸುಮಾರು 70 ಕವಿಗಳು, ‘ತಾಯಿ’ ವಿಷಯ ಕೇಂದ್ರೀಕರಿಸಿ ರಚಿಸಿದ 70 ಕವನಗಳನ್ನು ಸಂಪಾದಿಸಲಾಗಿದೆ. ಪಿ ಲಂಕೇಶ್ ಅವರ ‘ ಅಕ್ಷರ ಹೊಸ ಕಾವ್ಯ', ಶಾಂತರಸರ ‘ಬೆನ್ನ ಹಿಂದಿನ ಬೆಳಕು' , ಮಹದೇವಪ್ಪ ಅವರ ‘ಅಪರಿಮಿತ ಕತ್ತಲೆಯ ವಿಪರೀತದ ಬೆಳಕು ' ಚಂಪಾ ಅವರ ‘ಗಾಂಧಿ ಸಂಕ್ರಮಣ ಕಾವ್ಯ’ ಅಂಥಾಲಜಿ ಅನ್ನಬಹುದಾದ ಕೃತಿಗಳ ಸಾಲುಗಳಲ್ಲಿ ‘ಅವ್ವ’ ಸೇರುತ್ತದೆ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.
ಶಿಷ್ಟ ಮತ್ತು ಜನಪದ ಸಾಹಿತ್ಯದಲ್ಲಿ ತಾಯಿಯನ್ನು ಕುರಿತು ಕವಿತೆ, ಹಾಡುಗಳು ರಚಿತವಾಗಿವೆ. ಸಮಾಜ ಮತ್ತು ಸಂಸ್ಕೃತಿಯು ತಾಯಿಗೆ ವಿಶಿಷ್ಟ ಸ್ಥಾನ ನೀಡಿ ಗೌರವಿಸಿವೆ. ತಾಯಿ ಕೇವಲ ಮಗುವಿಗೆ ಮಾತ್ರ ಜನ್ಮ ಕೊಡದೆ, ಅವಳು ನಾಗರಿಕತೆ ಹಾಗೂ ಸಂಸ್ಕೃತಿಗಳ ತಾಯಿಯೂ ಹೌದು. ಜನಪದರಂತು ಭೂಮಿಗೂ, ದೈವಕ್ಕೂ ಹೋಲಿಸಿದ್ದಾರೆ. ಹೊಸಗನ್ನಡದ ಬೇಂದ್ರೆ,ಕುವೆಂಪು, ಗೋವಿಂದ ಪೈ,ಪಂಜೆ ಮಂಗೇಶರಾಯರು, ಪಿ ಲಂಕೇಶ್, ಚಂದ್ರಶೇಖರ ಕಂಬಾರ, ಚಂದ್ರಶೇಖರ್ ಪಾಟೀಲ್ ಹಲವಾರು ಕವಿಗಳು ತಾಯಿ ಕುರಿತು ಕವನಗಳನ್ನು ರಚಿಸಿದ್ದಾರೆ. ವಿವಿಧ ಕವಿಗಳಿಂದ ಕವನಗಳನ್ನು ಆಯ್ದುಕೊಳ್ಳಲಾಗಿದೆ. ತಾಯಿ ಪರಂಪರೆಯ ಚರಿತ್ರೆಯು ಆಗಿ ತೋರಬಲ್ಲದು. ಅವ್ವ ಸಂಕಲನದ ಬಹಳಷ್ಟು ಕವಿತೆಗಳು-ಸಾಂಸ್ಕೃತಿಕ ಕ್ರಿಯಾಶೀಲತೆಯ ವ್ಯಾಪಕತೆ ಮತ್ತು ಸೂಕ್ಷ್ಮತೆಗೆ ಇಲ್ಲಿನ ಬಹಳಷ್ಟು ಉದಯೋನ್ಮುಖ ಯುವ ಹಾಗೂ ಹಿರಿಯರ ಕವಿತೆಗಳು ಸಾಕ್ಷಿಯಾಗಿವೆ. ತಾಯಿಯ ಪ್ರೀತಿ-ಮಮತೆಯನ್ನು, ಕುರಿತು ಹಾಡುವ ತನ್ನದೇ ಆದ ಹೊಸ ಹಾದಿಯನ್ನು ನಿರ್ಮಿಸಿಲ್ಲ ಎನ್ನಬಹುದಾದರೂ ತಾಯಿಯ ಬಗೆಗಿನ ಬಹುಮುಖ್ಯ ವೈವಿಧ್ಯಮಯವಾದ ಅಭಿವ್ಯಕ್ತಿಯನ್ನು ಕಾಣುತ್ತೇವೆ ಎಂದೂ ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.