ಜ್ಞಾನ-ಭಕ್ತಿ-ವೈರಾಗ್ಯ ಈ ಮೂರೂ ವೇದಾಂತವೆಂಬ ಕಟ್ಟಡದ ಮೂರು ಮೂಲೆ ಗಲ್ಲುಗಳು ಎನ್ನುತ್ತದೆ ಲೇಖಕ ಲಕ್ಷ್ಮೀಕಾಂತ್ ಪಾಟೀಲ್ ಅವರ ‘ಅವರಿವರವರವನಲ್ಲವೋ ಈ ದೇವಾ’ ಕೃತಿ. ಈ ಕಟ್ಟಡದಲ್ಲಿಯೇ ನಮ್ಮ ಸನಾತನ-ವೈದಿಕ ಧರ್ಮ ಪರಂಪರಾಗತವಾಗಿ ನೆಲೆಗೊಂಡಿದೆ. ಕಾಲ ಕಾಲಕ್ಕೆ ಭರತಖಂಡದ ಉದ್ದಗಲಕ್ಕೂ ಮಹಾಮಹಾ ವಿಭೂತಿ ಪುರುಷರು ಅವತರಿಸಿ ನಮ್ಮ ವೇದಾಂತ ಪರಂಪರೆಯನ್ನು, ವೇದ ಸಂಸ್ಕೃತಿಯನ್ನು ಪೋಷಿಸುತ್ತ ಬಂದಿರುವುದು ನಮ್ಮ ಅಜಾನಜ ಇತಿಹಾಸ. ಇದರಲ್ಲಿ ನಮ್ಮ ಕರ್ನಾಟಕದ ಶಿವಶರಣರು ಹರಿದಾಸರ ಕಾಲ ಸುವರ್ಣಯುಗ ಎಂದೇ ಹೇಳಬೇಕು. ಶರಣ ಸಾಹಿತ್ಯ ಜ್ಞಾನ ಸಂಪದವಾದರೆ, ದಾಸ ಸಾಹಿತ್ಯ ಭಕ್ತಿ ಸಂಪದ ಎನಿಸಿ ಸಾಧನೆಯ ದಾರಿಯುದ್ದಕ್ಕೂ ದಿವ್ಯಜ್ಯೋತಿ ಬೆಳಗಿಸಿವೆ. ಗಾಡಾಂಧಕಾರದಲ್ಲಿರುವ ಸುಪ್ತ ಸಮಾಜವನ್ನು, ಅನಿಷ್ಠ ಸಂಪ್ರದಾಯಗಳನ್ನು ತಿದ್ದಲು ತಮ್ಮ ವಿವಿಧ ಪದಪದ್ಯ-ಸುಳಾದಿ-ಉಗಾಭೋಗಗಳ ಮೂಲಕ ಮಾರ್ಮಿಕ ಉಪದೇಶ ನೀಡಿ ಚೇತರಿಸಿ, ಸಾಧಕರ ಮಾರ್ಗಕ್ಕೆ ಬೆಳಕನ್ನು ನೀಡಿದ ಹರಿದಾಸರು ಕನ್ನಡ ಸಾಹಿತ್ಯ ಸರಸ್ವತಿ ಮಂದಿರದಲ್ಲಿಯ ಎಂದೂ ಆರದ ನಂದಾದೀಪಗಳು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಮೋಹನದಾಸರು 'ಮೋಹನವಿಠಲ' ಅಂಕಿತದಲ್ಲಿ ರಚಿಸಿರುವ 52 ಕೀರ್ತನೆಗಳು, 4 ಸಂಪ್ರದಾಯದ ಹಾಡು, 3 ಸುಳಾದಿ ಹಾಗೂ ಕೆಲವು ಉಗಾಭೋಗಗಳು ಇದುವರೆಗೆ ದೊರೆತಿದ್ದವು. 217 ನುಡಿಗಳಷ್ಟು ದೀರ್ಘವಾಗಿ ಹರಡಿಕೊಂಡು ಬಲು ಅರ್ಥಪೂರ್ಣ ಎನಿಸುವ 'ಕೋಲುಪದ' ಮೋಹನದಾಸರನ್ನು ಅತೀ ಎತ್ತರಕ್ಕೆ ಒಯ್ದು ನಿಲ್ಲಿಸಿದ ಪಾಂಡಿತ್ಯಪೂರ್ಣ ವಿಶೇಷ ಕೃತಿ, ಕರ್ನಾಟಕ ಸರಕಾರ ಹೊರತಂದ 'ಸಮಗ್ರ ದಾಸ ಸಂಪುಟ'ದಲ್ಲಿಯೂ ಇಷ್ಟು ಕೃತಿಗಳದ್ದೇ ಸಿಂಹಪಾಲು. ಪ್ರಾತಃಸ್ಮರಣೀಯ ಗೋರಬಾಳ ಹಣಮಂತರಾಯರು ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿ ಬರೆದಿಟ್ಟುಕೊಂಡಿದ್ದ ಮೋಹನದಾಸರ ರಚನೆಯ 57 ಕೀರ್ತನೆ, 3 ಸುಳಾದಿಗಳನ್ನು ಇತ್ತೀಚೆಗೆ ಶ್ರೀ ವಿಜಯವಿಟ್ಟಲ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರು-ಹರಪನಹಳ್ಳಿ ಇವರು ಪ್ರಕಟಿಸಿದ್ದಾರೆ. ಇದುವರೆಗೆ ಮೋಹನವಿಠಲ ಅಂಕಿತದಲ್ಲಿ ಮುದ್ರಣ ಕಂಡ ಎಲ್ಲ ಕೃತಿಗಳನ್ನು ಹೊರತುಪಡಿಸಿ, ನಾನು ಕ್ಷೇತ್ರ ಕಾರ್ಯದಲ್ಲಿ ಶೋಧಿಸಿ, ಹಸ್ತಪ್ರತಿ ಸಮೇತ ಸಂಗ್ರಹಿಸಿ, ಶುದ್ಧಪಾಠ ಮಾಡಿಸಿ, ಈಗ ಹೊರತರುತ್ತಿರುವ ಸಂಪೂರ್ಣ ಸಂಶೋಧನಾ ಗಂಥವಿದು. ಗಾತ್ರದಲ್ಲಿ ಚಿಕ್ಕದಾದರೂ ಅನೇಕ ವಿಶಿಷ್ಟತೆಗಳಿಂದ ಕೂಡಿದ, ಶೈಕ್ಷಣಿಕ ಮಹತ್ವವುಳ್ಳ ಕೀರ್ತಿ ಇದಕ್ಕಿರುತ್ತದೆ. ಈ ಗ್ರಂಥವು ಶ್ರೀ ಮೋಹನದಾಸರ ರಚನೆಯ ಒಟ್ಟು 57 ಕೀರ್ತನೆಗಳನ್ನು ಹೊತ್ತು ಬರುತ್ತಿದೆ.
©2024 Book Brahma Private Limited.