'ಅಟೆಂಷನ್ ಪ್ಲೀಸ್’ ಅಕ್ಕಯ್ ಪದ್ಮಶಾಲಿ ಮತ್ತು ಮಾಳವಿಕಾ (ಲಕ್ಷ್ಮಣ್ ಕನಕುಂಟ್ಲಾ) ಅವರ ಬೆನ್ನುಡಿ ಬರಹವಿದೆ; ಮಡಿವಂತ ಸಮಾಜವು ಸದಾ ಕಾಲ ಶೀಲವಂತಿಕೆ ಪ್ರದರ್ಶನ ಮಾಡುತ್ತಲೇ, ಎಲ್ಲವನ್ನೂ ನಿಯಂತ್ರಿಸುವ ಅಥವಾ ತುಚ್ಚವಾಗಿ ಕಾಣುವ ಶ್ರೇಷ್ಠತೆಯ ಸೋಗು ಹಾಕಿಕೊಂಡೆ ಬರುತ್ತಿದೆ. ಇದಕ್ಕೆ ಮನುಷ್ಯ ಪ್ರೇಮದ ಹಂಬಲವಾಗಲಿ, ಮನಸ್ಸು ಕೇಂದ್ರಿತ ಸಂಸ್ಕಾರವಾಗಲಿ ಇರಲಾರದು. ಇದ್ದರೂ ಕೂಡ ಅದು ತೊರುಂಬ ಲಾಭವಷ್ಟೆ! ಲೈಂಗಿಕ ವಿಚಾರವನ್ನು ಮುಕ್ತವಾಗಿ ಮಾತಾಡುವುದು ಕೂಡ ಅಪರಾಧವೆಂಬುದು ಮಡಿವಂತ ಸಮಾಜದ ಫರ್ಮಾನು. ಆದರೆ, ಈ ಸಮಾಜದಲ್ಲಿ ಲೈಂಗಿಕ ದೌರ್ಜನ್ಯ ಆದಷ್ಟೂ ಇನ್ನೆಲ್ಲೂ ಆಗುತ್ತಿಲ್ಲವೆಂಬುದೇ ವಿಪರ್ಯಾಸ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಬದುಕಿನ ಅಸಂಖ್ಯಾತ ಗಾಯಗಳು, ಸಮಾಜದ ನಕಲಿ ಮುಲಾಮಿನ ಕಂಪನಿತನಗಳು ಎರಡನ್ನೂ ಕೂಡ ಈ ಪುಸ್ತಕದಲ್ಲಿ ಕಾಣಬಹುದು. ಈ ಸಮುದಾಯವನ್ನು ಸಮಾಜ ಕಾಣುವ ರೀತಿಯನ್ನು, ನೊಂದಿರುವ ಸಾಕಷ್ಟು ಜನ ತಮ್ಮದೇ ಮಾತಿನಲ್ಲಿ ವಿವರಿಸಿದ್ದಾರೆ. "ಬೂದಿ ಮಾತ್ರ ಬಲ್ಲದು, ಬೇಯುವ ಬಗೆಯನ್ನು" ಎನ್ನುವ ಕವಿ ಮೂಡ್ನಕೂಡು ಚಿನ್ನಸ್ವಾಮಿ ಅವರ ಮಾತಿನಂತೆ, ನೊಂದವರ ನೋವನ್ನು ಸ್ವತಃ ಅವರೇ ಹೇಳುವ ಕಥನದೇ ಈ "ಆಟೆಂಷನ್ ಪ್ಲೀಸ್”. ಇಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕತೆ-ಕವನಗಳನ್ನು ಸಂಗ್ರಹಿಸಲಾಗಿದೆ.
©2024 Book Brahma Private Limited.