ವಿದ್ವತ್ತು, ಸಂಗೀತ, ಯೋಗ, ಅಧ್ಯಾಪನ, ಆಚರಣೆ, ಉಪನ್ಯಾಸ, ಬರವಣಿಗೆ, ಸಂಘಟನೆ, ಸಮಾಜಸೇವೆ, ಅಧ್ಯಾತ್ಮ ಮುಂತಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವವರು ಡಾ. ಗಣಪತಿ ಭಟ್ಟ. 1960ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತೂರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಧಾರವಾಡದಲ್ಲಿ ನ್ಯಾಯಶಾಸ್ತ್ರ, ವ್ಯಾಕರಣ ಮತ್ತು ಸಂಗೀತ ಅಭ್ಯಾಸ ಪೂರೈಸುತ್ತಿರುವಾಗಲೇ 1987 ರಲ್ಲಿ ಅನಾಯಾಸವಾಗಿ ದೊರೆತ ಶಿಕ್ಷಕವೃತ್ತಿಯೊಂದಿಗೆ ನೂರಾರು ವಟುಗಳಿಗೆ ಚತುರ್ವೇದ ಮಂತ್ರಗಳನ್ನು, ಮಹಿಳೆಯರಿಗೆ ರಾಗಸಹಿತವಾಗಿ ಸ್ತೋತ್ರಗಳನ್ನು, ವಿದ್ಯಾರ್ಥಿಗಳಿಗೆ ಸುಭಾಷಿತ-ಭಗವದ್ಗೀತೆಗಳನ್ನು ವರ್ಗ-ಶಿಬಿರಗಳ ಮೂಲಕ ಸುಸ್ವರವಾಗಿ ಬೋಧಿಸಿದ್ದಾರೆ. ವೇದಿಕೆಗಳನ್ನೂ ಕಲ್ಪಿಸಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ 50ಕ್ಕೂ ಹೆಚ್ಚು ಪುಸ್ತಕ-ಧ್ವನಿಮುದ್ರಿಕೆಗಳನ್ನು ಪ್ರಕಟಿಸಿದ್ದಲ್ಲದೇ ಹತ್ತು ವರ್ಷಗಳಲ್ಲಿ ಸಹಸ್ರಾಧಿಕ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ನೂರಾರು ಸಂಸ್ಕೃತಿ ಸಾಧಕರನ್ನು ಗುರುತಿಸಿ ಗೌರವಿಸಿದ್ದಾರೆ.
ಕೃತಿಗಳು: ಸೌಂದರ್ಯಲಹರೀ, ಮಹಾಗುರುಮಹಿಮೆ, ರಾಗಕೋಶ, ಸಾಮಗಾನ, ಭಜ ಗೋವಿಂದಮ್, ಲಕ್ಷ್ಮೀಪೂಜಾವಿಧಾನ, ಅಷ್ಟಾಂಗಯೋಗರಹಸ್ಯ, ಶಿವಾನಂದಲಹರಿ, ಮಂಗಲಾಷ್ಟಕಮ್ ರಾಜಾಶೀರ್ವಾದ ಮತ್ತು ಆರತಿ ಹಾಡುಗಳು, ಗಂಗಾಲಹರಿ ಶಿವಮಹಿಮ್ನ ಸ್ತೋತ್ರ, ನಾರದೀಯ ಸಂಗೀತ, ನೀತಿಶತಕಮ್, ಸ್ತೋತ್ರದ್ವಯಮ್, ಸುಸಂಸ್ಕೃತ ಸೇತುವೆ, ಪ್ರವಾಸ ಪಾರಾಯಣ ಸ್ತೋತ್ರಗಳು, ಸಂಸ್ಕೃತಗಾನಧುನೀ, ವೈಭವ ಪಂಚಕಮ್, ಸಂಗೀತ ರಸ ಮಾಧುರ್ಯ