ಎಸ್.ಪಿ. ಪದ್ಮಪ್ರಸಾದ್ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.
ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಜಾನಪದ, ಕಾವ್ಯ, ನಾಟಕ, ವಿಮರ್ಶೆ, ಕಥೆ, ಲಲಿತ ಪ್ರಬಂಧ, ಕಾದಂಬರಿ, ಜೀವನ ಚರಿತ್ರೆ, ಗ್ರಂಥಸಂಪಾದನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳ ರಚನೆ. ಜಾನಪದ ಮತ್ತು ಜೈನಕಥಾ ಸಾಹಿತ್ಯ, ಹಾಡ್ಹೇಳೆ ತಂಗಿ ದನಿ ಎತ್ತಿ, ಜೈನ ಜನಪದಗೀತೆಗಳು ಮೊದಲಾದ ೮ ಜಾನಪದ ಸಾಹಿತ್ಯ ಕೃತಿಗಳು; ಕೆರೆಗೆ ಹಾರ, ನಗೆ ಚೆಲ್ಲಿದ ಹುಡುಗಿ, ಜಲಿಯನ್ ವಾಲಾ ಬಾಗ್, ಮೊದಲಾದ ೭ ನಾಟಕಗಳು; ಇದರಲ್ಲಿ ನನ್ನ ಜನ, ನನ್ನ ಕಿಟಕಿಯ ಆಚೆ, ಆರೋಹಣ, ದ್ರಾಕ್ಷಿ ಗೊಂಚಲು, ದೀಪಾವಳಿಯ ಬಳಿಕ ಮೊದಲಾದ ೫ ಕವಿತಾ ಸಂಕಲನಗಳು; ಬೃಂದಾವನ, ಮಗುವೆಂಬ ಮುದ್ದು ಕವಿತೆ ಮುಂತಾದ ಲಲಿತ ಪ್ರಬಂಧ ಸಂಕಲನಗಳು; ಶೈಕ್ಜಷಣಿಕ ಸಂಶೋಧನೆ, ಶಾಲಾ ನಿರ್ವಹಣೆ, ಭಾರತದಲ್ಲಿ ಪ್ರೌಢ ಶಿಕ್ಷಣ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶಿಕ್ಷಣ ಮತ್ತು ರಾಷ್ಟ್ರೀಯ ಕಾಳಜಿಗಳು ಮೊದಲಾದ ೧೦ ಶೈಕ್ಷಣಿಕ ಕೃತಿಗಳು; ಪಾಯಣ್ಣ ಕವಿಯ ಪ್ರಾಚೀನ ಜೈನ ನಾಟಕಗಳು, ಆಧುನಿಕ ಜೈನ ಪುಣ್ಯ ಪುರುಷರು ಮಾಲಿಕೆಯಲ್ಲಿ ಎಂಟು ಗ್ರಂಥಗಳೂ ಸೇರಿ ೧೦ ಸಂಪಾದಿತ ಕೃತಿಗಳು; ಸಿ.ಪಿ.ಕೆ. ಒಂದು ಕಾವ್ಯಾಭ್ಯಾಸ, ಕಮಲಾ ಹಂಪನಾ ಒಂದು ಸಾಂಸ್ಕೃತಿಕ ಅಧ್ಯಯನ, ಆಸ್ವಾದನೆ ನಿಕಷ ಮೊದಲಾದ ವಿಮರ್ಶಾ ಕೃತಿಗಳು; ಜೀವನ ಚರಿತ್ರೆ, ಪ್ರವಾಸ ಕಥನ ಹಾಗೂ ೫೦ ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗ್ರ,ಥ ‘ಸುವರ್ಣ ಪದ್ಮ’ ಮತ್ತು ೬೦ರ ಸಂಭ್ರಮದಲ್ಲಿ ‘ಸತ್ವ’ ಕೃತಿಗಳು ಸೇರಿ ಒಟ್ಟು ೬೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.