‘ಡಾ. ಎಸ್.ಎಲ್. ಭೈರಪ್ಪ ಅವರ ಕಾದಂ-ಕಥನಗಳು’ ಕೃತಿಯನ್ನು ಲೇಖಕ ಶ್ರೀನಿವಾಸ ಹಾವನೂರ ಸಂಪಾದಿಸಿದ್ದಾರೆ. ಇಲ್ಲಿ ಭೈರಪ್ಪನವರ ವಂಶವೃಕ್ಷ: ಸಾಕ್ಷಿ: ತಂತು: ದಾಟು ಮತ್ತು ಪರ್ವ ಈ ಕಾದಂಬರಿಗಳಲ್ಲಿಯ ರಸವತ್ತಾದ ಕಥಾನಕಗಳನ್ನು ಒಳಗೊಂಡಿದೆ. ಕೃತಿ ರಚನೆಯ ಕುರಿತು ತಿಳಿಸುತ್ತಾ ಕೆಲವು ವರ್ಷಗಳ ಹಿಂದೆ ಕಸ್ತೂರಿ- ಮಾಸಪತ್ರಿಕೆಯಲ್ಲಿ ಡಾ. ಭೈರಪ್ಪ ಅವರ ದ ಮೂರು ಕಾದಂಬರಿಗಳ ಕಥನಗಳನ್ನು ಪ್ರಕಟಿಸಿದ್ದೆ. ಅದಕ್ಕೆ ಇನ್ನೆರಡನ್ನು ಸೇರಿಸಿ ಈ ಸಂಕಲನವನ್ನು ಹೊರತರಲಾಗಿದೆ. ಭೈರಪ್ಪನವರ ಅಧ್ಯಕ್ಷತೆಯ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಇಂಥ ಸಂಕಲನವನ್ನು ಪ್ರಕಟಿಸಬೇಕು. ಅದರಿಂದ ಅವರ ಕಾದಂಬರಿಗಳನ್ನ ಆಮೇಲೆ ಓದತಕ್ಕುದು ಎಂಬುದಕ್ಕೆ ಪ್ರಚೋದನೆ ದೊರೆಯುತ್ತದೆ ಎಂಬುದಾಗಿ ಪ್ರೊ.ಜಿ. ಅಶ್ವತ್ಥನಾರಾಯಣರು ಸೂಚಿಸಿದರು. ಇನ್ನೊಬ್ಬ ಮಿತ್ರ ಡಾ.ನಾ. ದಾಮೋದರ ಶೆಟ್ಟಿ ಅವರು ದನಿಗೂಡಿಸಿ ಅದರ ಮುದ್ರಣ, ಪ್ರಕಾಶನ ಕಾರ್ಯದಲ್ಲಿ ಕೈಗೂಡಿಸಿದರು ಎಂದಿದ್ದಾರೆ. ಜೊತೆಗೆ ಕಾದಂ-ಕಥನ ಎನ್ನುವುದಕ್ಕೆ ತುಸು ವಿವರಣೆ ಕೊಡಬೇಕು ಎಂದಿರುವ ಅವರು ಇಲ್ಲಿಯವು ಮೂಲ ಕೃತಿಗಳ ಸಂಗ್ರಹ ರೂಪವೇನಲ್ಲ. ಕಾದಂಬರಿಕಾರರ ಶಬ್ದಗಳಲ್ಲಿಯೇ ಆ ಕೃತಿಗಳ ರಸವತ್ತಾದ ಭಾಗಗಳನ್ನು ಕಥನಿಸುವುದು ಇವುಗಳ ಆಶಯವಾಗಿದೆ. ಇಡಿಯಾಗಿ ಕಾದಂಬರಿಯನ್ನು ಓದುವುದಕ್ಕೆ ಇವು ಪ್ರವೇಶಿಕೆ ಇದ್ದಂತೆ ಎಂದಿದ್ದಾರೆ. ಇಲ್ಲಿ ವಂಶವೃಕ್ಷದಿಂದ ಕಾತ್ಯಾಯನಿ, ಸಾಕ್ಷಿ ಕಾದಂಬರಿಯಿಂದ ಮಂಡಿ ಸಾಹುಕಾರ, ತಂತು ಕಾದಂಬರಿಯಿಂದ ರ್ಯಾಗಿಂಗ್, ದಾಟು ಕಾದಂಬರಿಯಿಂದ ಮಾತಂಗಿ, ಪರ್ವದಿಂದ ನಿಯೋಗ ಭಾಗಗಳು ಸಂಕಲನಗೊಂಡಿವೆ.
©2024 Book Brahma Private Limited.