'ಸುವರ್ಣ ಕಥನ' ಕೋಲಾರದ ಚಿನ್ನದ ಗಣಿಗಳ ಕುರಿತ ಅಧ್ಯಯನ ಕೃತಿ. ಭಾರತಕ್ಕೆ ಬ್ರಿಟಿಷರು ಬರುವ ಮೊದಲೇ ಇಲ್ಲಿ ಚಿನ್ನವನ್ನು ತೆಗೆಯಲಾಗುತ್ತಿತ್ತು. ಬೆಲೆಬಾಳುವ ಈ ಲೋಹದ ಉತ್ಪಾದನೆಯ ಹಾದಿ ಅತ್ಯಂತ ಕಠಿಣ. ಸಾವಿರಾರು ಅಡಿಗಳ ಆಳದವರೆಗೆ ಕೊರೆದಿರುವ ಸುರಂಗ ಮಾರ್ಗಗಳಲ್ಲಿ ಇಳಿದು ಚಿನ್ನದ ಅದಿರನ್ನು ಹೊತ್ತು ತರುವವರು ಬಡ ಕೂಲಿ ಕಾರ್ಮಿಕರು. ಒಂದು ಹೊತ್ತಿನ ಕೂಳಿಗಾಗಿ ಇಂತಹ ಅಪಾಯಕಾರಿಯಾದ ಕೆಲಸಗಳಲ್ಲಿ ತೊಡಗಬೇಕಾದುದು ಅವರಿಗೆ ಅನಿವಾರ್ಯ. ಚಿನ್ನವನ್ನು ಅದಿರಿನಿಂದ ಬೇರ್ಪಡಿಸಲು ಬಳಸುವ ಸೈನೈಡ್ ಮುಂತಾದ ಅಪಾಯಕಾರಿ ರಾಸಾಯನಿಕಗಳು ಮಾರಣಾಂತಿಕ ಕಾಯಿಲೆಗಳಿಗೆ ಎಡೆಮಾಡಿ ಕೊಡುತ್ತವೆ. ನೀರಿನ ಮೂಲಗಳಾದ ಕೆರೆ, ಬಾವಿ ಸೇರಿ ಭೂಮಿಯ ಫಲವತ್ತತೆ ನಾಶಮಾಡಿವೆ. ಕೋಲಾರದ ಚಿನ್ನದ ಗಣಿಗಳ ಸ್ಥಿತಿಗತಿ, ಕಾರ್ಮಿಕರ ಬವಣೆ, ವೇತನ ತಾರತಮ್ಮ, ಬ್ರಿಟಿಷರ ದರ್ಪದ ಆಡಳಿತ, ತ್ಯಾಜ್ಯದಿಂದಾದ ಹಾನಿ ಮುಂತಾದ ಸಂಗತಿಗಳನ್ನು ಲೇಖಕರು ತಮ್ಮ ಕೃತಿ ’ಸುವರ್ಣ ಕಥನ’ದಲ್ಲಿ ಕೂಲಂಕಷವಾಗಿ ವಿವರಿಸಿದ್ದಾರೆ.
ವಿಮರ್ಶೆ : ಸುವರ್ಣ ಕಥನ
ಹಳದಿ ಲೋಹವೊಂದು ಹೇಗೆಲ್ಲ ಸಂಘರ್ಷದ ಕಥೆ ಹುಟ್ಟುಹಾಕಬಲ್ಲದು ಎಂಬುದನ್ನು ತಿಳಿಯಬೇಕಾದರೆ ಕೋಲಾರ ಚಿನ್ನದ ಗಣಿಗಳತ್ತ ಒಮ್ಮೆ ಚಿತ್ತ ಇಡಬೇಕು. ಅದು ಹೇಗೆ ಇತಿಹಾಸವನ್ನು ಸೃಷ್ಟಿಸಿತು ಎಂಬುದನ್ನು ಡಾ.ಎಂ.ವೆಂಕಟಸ್ವಾಮಿ ಅವರ ಸುವರ್ಣ ಕಥನ ತಿಳಿಸುತ್ತದೆ. ಆದರೆ, ಇದು ಬರೀ ಕೆಜಿಎಫ್ ಕಥನವಷ್ಟೇ ಅಲ್ಲ. ವೇದಪುರಾಣಗಳಲ್ಲಿ ಚಿನ್ನ ಹೇಗೆಲ್ಲ ವ್ಯಾಖ್ಯಾನಗೊಂಡಿದೆ. ಬೈಬಲ್ನಲ್ಲಿ ಚಿನ್ನ, ಇಜಿಪ್ಟ್ ನಲ್ಲಿ ಹುಟ್ಟಿದ ರಸವಿದ್ಯೆ, ಅಶೋಕನ ಕಾಲದ ಶಿಲಾಶಾಸನಗಳು ಎಲ್ಲವನ್ನು ಹೇಳುತ್ತವೆ. ಇದೊಂದು ಮಹಾಪ್ರಬಂಧವಾಗಿರುವುದರಿಂದ ಕಥನವು ಹಲವು ಮಗ್ಗಲುಗಳನ್ನು ಪೂರ್ವಗ್ರಹವಿಲ್ಲದೇ ವಿಶ್ಲೇಷಿಸಲಾಗಿದೆ. ಭೂಮಿಯ ಸಾವಿರಾರು ಮೀಟರುಗಳ ಆಳದ ಕತ್ತಲ ಸುರಂಗಗಳಲ್ಲಿ ಚಿನ್ನ ತೆಗೆಯುತ್ತ ಅನ್ನಕ್ಕಾಗಿ ವ್ಯಥೆಪಟ್ಟವರ ಕಥೆ ಒಂದು ಕಡೆಯಾದರೆ, ಈ ತಿರಸ್ಕೃತ ಜನಾಂಗಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮಾನತೆಗೆ ನಡೆಸಿದ ಹೋರಾಟ ಇನ್ನೊಂದೆಡೆ. ಒಟ್ಟಾರೆ, ಚಿನ್ನದ ಹಿಂದಿರುವ ಕರಾಳತನವನ್ನು ಲೇಖಕರು ಮಹಾಪ್ರಬಂಧವಾಗಿಸಿದ್ದಾರೆ.
- ಪ್ರಜಾವಾಣಿ.
©2024 Book Brahma Private Limited.