೧೩ ನೇ ಶತಮಾನದ ಕನ್ನಡ ಸಾಹಿತ್ಯ ಪ್ರಕಾರಗಳು ಮತ್ತು ಪ್ರವೃತ್ತಿಗಳು- ಕೃತಿಯು ಡಾ.ಮಾದಪ್ಪ ಜಿ ಅವರ ಸಂಶೋಧನಾತ್ಮಕ ಮಹಾ ಪ್ರಬಂಧದ ಪುಸ್ತಕ ರೂಪ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 13 ನೇ ಶತಮಾನದ ಸಾಹಿತ್ಯದ ಕಾಲಘಟ್ಟ ಮಹತ್ವಪೂರ್ಣ. ಸಾಮಾನ್ಯವಾಗಿ ಆಧುನಿಕ ಸಂಶೋಧಕರಲ್ಲಿ ವಿಭಿನ್ನ ಮನೋಧೋರಣೆ ಇದೆ. ಒಂದು ಕಾಲಘಟ್ಟದಲ್ಲಿಯ ಯಾವುದೋ ಪ್ರಸಿದ್ಧ ಅಥವಾ ಮಹತ್ವದ ಕೃತಿಕಾರನ ಕಾವ್ಯ ಕುರಿತು ಸಂಶೋಧಿಸುವುದು, ಆ ಬಗೆಯದು. ಈ ಕೃತಿಯಲ್ಲಿ ಒಟ್ಟು ಒಂದು ಶತಮಾನದ ಸುಮಾರು 27 ಕವಿಗಳ ಒಟ್ಟು 45 ಕ್ಕೂ ಹೆಚ್ಚು ಕಾವ್ಯಗಳ ಅಧ್ಯಯನವಿದೆ. 13ನೇ ಶತಮಾನದ ಒಂದು ಸಾಹಿತ್ಯದ ಸಂಕ್ರಮಣದ ಕಾಲ. ವಚನ ಸಾಹಿತ್ಯದ ನಂತರದಲ್ಲಿ ಕಾಣಿಸಿಕೊಂಡ ಅನೇಕ ವೀರಶೈವ, ಜೈನ ಮತ್ತು ವೈದಿಕ ಕವಿಗಳ ಧಾರ್ಮಿಕ ಕಾವ್ಯಗಳು ಹೇಗೆ ಧರ್ಮ ಪ್ರಸಾರದ ಕೇಂದ್ರಬಿಂದುವಾದವು, ಕಾವ್ಯ ಪ್ರಕಾರಗಳಲ್ಲಿ ಹೇಗೆ ಮಾರ್ಗದಿಂದ ದೇಸಿಯತ್ತ ಸಾಗಿದವು ಮತ್ತು ಅವುಗಳ ವೈಶಿಷ್ಟ್ಯಗಳನ್ನು ಪ್ರಗತಿಶೀಲ ದಲಿತ ಮತ್ತು ಮಹಿಳಾ ನೆಲೆಯಲ್ಲಿ ನೋಡಲಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ಮತ್ತು 13 ನೇ ಶತಮಾನಗಳ ಸಾಹಿತ್ಯ ಸಂದರ್ಭ ತುಂಬ ಪ್ರಮುಖ ಮತ್ತು ವಿಶಿಷ್ಟ. 12ನೇ ಶತಮಾನದ ವಚನಕಾರರು. ಅಂದಿನ ಕಾಲದ ಶೋಷಣೆ, ಅನ್ಯಾಯ, ಮೌಢ್ಯ, ಕಂದಾಚಾರ, ಅಸಮಾನತೆ, ಅನಾಚಾರ, ಸರ್ವಾಧಿಕಾರಿ ಮನೋಭಾವ, ಪ್ರಭುತ್ವದ ದುರಾಡಳಿತ, ಧಾರ್ಮಿಕ ಢಂಬಾಚಾರ- ಮುಂತಾದ ಮಾನವವಿರೋಧಿ, ಜೀವವಿರೋಧಿ ನಿಲುವು, ಆಚರಣೆಗಳನ್ನು ವಿಡಂಬಿಸಿ, ಅವುಗಳನ್ನು ಬೇರುಸಹಿತ ಕಿತ್ತೊಗೆಯಲು ನಡೆಸಿದ ಚಳವಳಿಯ ಪ್ರತಿಫಲವಾಗಿ ಸೃಷ್ಟಿಯಾದ ವಚನಸಾಹಿತ್ಯದ ಮತ್ತು ವಚನಕಾರರ ಪ್ರಭಾವವು ನಂತರದ 13 ನೇ ಶತಮಾನದ ಹರಿಹರ, ರಾಘವಾಂಕ, ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪಾಲ್ಕುರಿಕೆ ಸೋಮನಾಥ, ಉದ್ಭಟದೇವ, ಆಚಣ್ಣ, ಅಗ್ಗಳ, ಪಾರ್ಶ್ವಪಂಡಿತ, ರಟ್ಟಕವಿ ಮುಂತಾದ ಕವಿಗಳ ಮೇಲೆ ಬೀರಿದೆ. ಹಾಗಾಗಿ, 13ನೇ ಶತಮಾನದಲ್ಲಿ ರಚನೆಗೊಂಡ ಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಮುಖ್ಯ ಘಟ್ಟವಾಗಿ ನಿಂತುಕೊಳ್ಳುತ್ತದೆ
©2024 Book Brahma Private Limited.